ಚೆನ್ನೈ : ತಮಿಳುನಾಡಿನ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅನುಭವಿಸಿದ ಅನಿರೀಕ್ಷಿತ ಸೋಲನ್ನು ಪ್ರಶ್ನಿಸಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ವಿವಿಪ್ಯಾಟ್ (VVPAT) ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಮತ್ತು ವಿಜೇತ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಿ ತಮ್ಮನ್ನು ವಿಜೇತರೆಂದು ಘೋಷಿಸಬೇಕು ಎಂದು ಕೋರಿ ಸ್ಟಾಲಿನ್ ನ್ಯಾಯಾಲಯದ ಬಾಗಿಲು ತಟ್ಟಿದ್ದರು.
ಆದರೆ, ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ಸ್ಟಾಲಿನ್‌ಗೆ ದೊಡ್ಡ ಹಿನ್ನಡೆಯುಂಟಾಗಿದೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯ ಸಿಂಧುತ್ವವನ್ನು ಭಾರತೀಯ ಚುನಾವಣಾ ಆಯೋಗವು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಚುನಾವಣಾ ಫಲಿತಾಂಶವನ್ನು ನಿಗದಿತ ಸಮಯದೊಳಗೆ ‘ಚುನಾವಣಾ ಅರ್ಜಿ’ಯ (Election Petition) ಮೂಲಕ ಮಾತ್ರವೇ ಪ್ರಶ್ನಿಸಲು ಅವಕಾಶವಿದೆ ಎಂದು ಆಯೋಗ ವಾದಿಸಿತ್ತು. ಮೇ 4 ರಂದು ಫಲಿತಾಂಶ ಹೊರಬಿದ್ದ ನಂತರ, ಸ್ಟಾಲಿನ್ ಮೇ 7ರಂದು 14 ಇವಿಎಂ ಯಂತ್ರಗಳ ಪರಿಶೀಲನೆಗೆ ಕೋರಿದ್ದರು. ಆದರೆ, ಆಯೋಗವು ಜುಲೈ 29 ರಿಂದ ಆಗಸ್ಟ್ 5 ರವರೆಗೆ ಈ ಪ್ರಕ್ರಿಯೆ ನಡೆಸಿದ್ದರಿಂದ ತಮಗೆ ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಲು ವಿಳಂಬವಾಯಿತು ಎಂದು ಸ್ಟಾಲಿನ್ ಪರ ವಕೀಲರು ವಾದಿಸಿದ್ದರು.
ಟಿವಿಕೆ ಅಭ್ಯರ್ಥಿಗೆ ಜಯ
2011ರಲ್ಲಿ ಕೊಳತ್ತೂರು ಕ್ಷೇತ್ರ ರೂಪುಗೊಂಡಂದಿನಿಂದ ಸತತ ಮೂರು ಬಾರಿ ಗೆದ್ದು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದ ಎಂ.ಕೆ. ಸ್ಟಾಲಿನ್ ಅವರಿಗೆ 2026ರ ಚುನಾವಣೆಯಲ್ಲಿ ಆಘಾತಕಾರಿ ಸೋಲಾಗಿತ್ತು. ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ಅವರು ಸ್ಟಾಲಿನ್ ವಿರುದ್ಧ 8,795 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಬಾಬು ಅವರು 82,997 ಮತಗಳನ್ನು ಪಡೆದರೆ, ಸ್ಟಾಲಿನ್ 74,202 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ತಮ್ಮ ಐತಿಹಾಸಿಕ ಗೆಲುವಿನ ಕುರಿತು ಪ್ರತಿಕ್ರಿಯಿಸಿದ್ದ ವಿ.ಎಸ್. ಬಾಬು, “ಈ ಗೆಲುವು ನಮ್ಮ ನಾಯಕ ವಿಜಯ್ ಅವರ ವರ್ಚಸ್ಸಿಗೆ ಸಿಕ್ಕ ಪ್ರತಿಫಲ. ತಮಿಳುನಾಡಿನ ಜನತೆಗೆ ರಾಜಕೀಯ ಬದಲಾವಣೆ ಬೇಕಿತ್ತು. ನಾನು ಸ್ಥಳೀಯವಾಗಿ ಬೆಳೆದವನಾಗಿದ್ದರಿಂದ ಜನರ ನಾಡಿಮಿಡಿತ ನನಗೆ ತಿಳಿದಿದೆ. ಮುಖ್ಯಮಂತ್ರಿ ಅಥವಾ ಶಾಸಕ ಯಾರೇ ಆಗಿರಲಿ, ಮೊದಲು ಸ್ಥಳೀಯ ಜನರೊಂದಿಗೆ ಬೆರೆಯಬೇಕು” ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ ; ವ್ಯಾಪಾರಿಗಳೇ ಗಮನಿಸಿ ; ಸೆ.15ರೊಳಗೆ ಈ ಕೆಲಸ ಮಾಡದಿದ್ದರೆ ದುಡ್ಡೇ ಜಮೆಯಾಗಲ್ಲ!


















