ಬೆಂಗಳೂರು : ಮುಂಬರುವ 2027ರ ಏಕದಿನ ವಿಶ್ವಕಪ್ಗೆ ಭಾರತ ತಂಡದ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಭವಿಷ್ಯವೂ ಪ್ರಮುಖ ಚರ್ಚೆಯ ವಿಷಯವಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರಂತಹ ಹಿರಿಯ ಆಟಗಾರರು 2027ರ ವಿಶ್ವಕಪ್ ಯೋಜನೆಯ ಭಾಗವಾಗಲಿದ್ದಾರೆಯೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಅದರಲ್ಲೂ ರೋಹಿತ್ ವಿಚಾರದಲ್ಲಿ ಆಯ್ಕೆ ಸಮಿತಿ ಹಾಗೂ ತಂಡದ ನಿರ್ವಹಣೆಯ ಮುಂದಿನ ಯೋಜನೆ ಏನು ಎಂಬುದು ಕುತೂಹಲ ಮೂಡಿಸಿದೆ.
ಸೆಪ್ಟೆಂಬರ್ 3ರಂದು ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಗೂ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಭಾಗವಹಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಮಾತ್ರವಲ್ಲದೆ, ನ್ಯೂಜಿಲೆಂಡ್ ಪ್ರವಾಸ, ಪ್ರಮುಖ ಆಟಗಾರರ ಗಾಯದ ಸಮಸ್ಯೆ ಮತ್ತು ಪುನರ್ವಸತಿ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆಯಲಿದೆ.
ರೋಹಿತ್ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆಯ್ಕೆ ಸಮಿತಿಯ ಸದಸ್ಯರೊಬ್ಬರು ರೋಹಿತ್ಗೆ ಮುಂದಿನ ಯೋಜನೆಯಲ್ಲಿ ತಂಡದಿಂದ ಹೊರಗುಳಿಯುವ ಸೂಚನೆ ನೀಡಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಏಕದಿನ ಪಂದ್ಯದ ಬಳಿಕ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಚರ್ಚೆ ಜೋರಾಗಿತ್ತು. ಆದರೆ ಲಾರ್ಡ್ಸ್ನಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಭಾರತ ಆ ಪಂದ್ಯವನ್ನು ಸೋತಿದ್ದರೂ, ರೋಹಿತ್ ಅವರ ಶತಕದ ಬಳಿಕ ತಕ್ಷಣವೇ ನಿವೃತ್ತಿಯಾಗುವ ಸಾಧ್ಯತೆ ಸದ್ಯಕ್ಕೆ ದೂರವಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೂ, ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ವಿಶ್ವಕಪ್ಗೆ ರೋಹಿತ್ ತೆರಳುವುದು ಖಚಿತ ಎಂದು ಹೇಳಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ.
ಹೀಗಾಗಿ ಸೆಪ್ಟೆಂಬರ್ 3ರ ಬಿಸಿಸಿಐ ಸಭೆ ರೋಹಿತ್ ಅವರ ಭವಿಷ್ಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ರೋಹಿತ್ ಮುಂದುವರಿಯಲು ಬಯಸುತ್ತಾರೆಯೇ, ಅವರ ಫಿಟ್ನೆಸ್ ಮತ್ತು ಪ್ರದರ್ಶನವನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ ಹಾಗೂ 2027ರ ವಿಶ್ವಕಪ್ವರೆಗೆ ಅವರನ್ನು ತಂಡದ ಯೋಜನೆಯಲ್ಲಿ ಇರಿಸಿಕೊಳ್ಳಬೇಕೇ ಎಂಬ ವಿಚಾರಗಳು ಮುಂದಿನ ದಿನಗಳಲ್ಲಿ ನಿರ್ಣಾಯಕವಾಗಬಹುದು.
ಬುಮ್ರಾ, ಹಾರ್ದಿಕ್ ಫಿಟ್ನೆಸ್ ಕೂಡ ದೊಡ್ಡ ಸವಾಲು
ರೋಹಿತ್ ವಿಚಾರದ ಜೊತೆಗೆ ಭಾರತದ ಪ್ರಮುಖ ಆಟಗಾರರ ಗಾಯದ ಸಮಸ್ಯೆಯೂ ಬಿಸಿಸಿಐ ಸಭೆಯ ಪ್ರಮುಖ ಅಜೆಂಡಾಗಳಲ್ಲೊಂದಾಗಿದೆ. ವಿಶೇಷವಾಗಿ ಜಸ್ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಲಭ್ಯತೆ ಬಗ್ಗೆ ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಗೆ ಸ್ಪಷ್ಟ ಮಾಹಿತಿ ಅಗತ್ಯವಿದೆ. ಬುಮ್ರಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನಿಷ್ಠ ಒಂದು ಅಥವಾ ಎರಡು ಪಂದ್ಯಗಳಿಗೆ ಲಭ್ಯರಾಗಬಹುದು ಎಂಬ ಮಾಹಿತಿ ಆಯ್ಕೆ ಸಮಿತಿಗೆ ಅನೌಪಚಾರಿಕವಾಗಿ ದೊರೆತಿತ್ತು ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಆದರೆ ಅವರು ನಿರೀಕ್ಷೆಯಂತೆ ಆಡದಿರುವುದು ತಂಡದ ಯೋಜನೆ ಮೇಲೆ ಪರಿಣಾಮ ಬೀರಿದೆ.
ಹಾರ್ದಿಕ್ ಪಾಂಡ್ಯ ಕೂಡ ಐಪಿಎಲ್ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡಿಲ್ಲ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಅವರು ಭಾರತದ ಪ್ರಮುಖ ಆಟಗಾರರಾಗಿರುವುದರಿಂದ ಅವರ ಫಿಟ್ನೆಸ್ ಬಿಸಿಸಿಐಗೆ ದೊಡ್ಡ ಕಾಳಜಿಯಾಗಿದೆ. ಹಾರ್ದಿಕ್ ಇದೀಗ ಬೆಂಗಳೂರಿನಲ್ಲಿ ನೆಲೆಸಲು ಮನೆ ಬಾಡಿಗೆಗೆ ಪಡೆದಿದ್ದು, ಶೀಘ್ರದಲ್ಲೇ ಅಲ್ಲಿಯೇ ತರಬೇತಿ ಆರಂಭಿಸುವ ಯೋಜನೆ ಹೊಂದಿದ್ದಾರೆ ಎಂದು ವರದಿ ಹೇಳಿದೆ. ಆದರೆ ಏಕದಿನ ಕ್ರಿಕೆಟ್ಗೆ ಹಾರ್ದಿಕ್ ಅವರನ್ನು ಆಯ್ಕೆ ಮಾಡುವ ಮುನ್ನ ಅವರು 10 ಓವರ್ಗಳನ್ನು ಬೌಲ್ ಮಾಡುವಷ್ಟು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂಬುದನ್ನು ಸೆಂಟರ್ ಆಫ್ ಎಕ್ಸಲೆನ್ಸ್ ದೃಢಪಡಿಸಬೇಕು ಎಂಬುದು ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯ ನಿಲುವಾಗಿದೆ. ಹೀಗಾಗಿ ಕೇವಲ ಬ್ಯಾಟಿಂಗ್ ಸಾಮರ್ಥ್ಯ ಸಾಕಾಗುವುದಿಲ್ಲ; ಏಕದಿನ ಕ್ರಿಕೆಟ್ಗೆ ಅಗತ್ಯವಿರುವ ಸಂಪೂರ್ಣ ಆಲ್ರೌಂಡ್ ಸಾಮರ್ಥ್ಯವನ್ನು ಅವರು ಮರಳಿ ಪಡೆಯಬೇಕಾಗಿದೆ.
ಗಾಯಾಳುಗಳ ಮರಳುವ ದಿನಾಂಕದ ಬಗ್ಗೆ ಗೊಂದಲ
ಭಾರತೀಯ ಆಟಗಾರರ ಗಾಯ ಹಾಗೂ ಪುನರ್ವಸತಿ ನಿರ್ವಹಣೆಯಲ್ಲಿನ ಸಮಸ್ಯೆಗಳೂ ಸಭೆಯಲ್ಲಿ ಚರ್ಚೆಗೆ ಬರಲಿವೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಹಲವು ಪ್ರಮುಖ ಆಟಗಾರರು ಪುನರ್ವಸತಿ ಪಡೆಯುತ್ತಿದ್ದಾರೆ. ಆದರೆ ಆಟಗಾರರ ದೇಹದ ಸ್ವಭಾವ ಮತ್ತು ಗಾಯದ ತೀವ್ರತೆ ವಿಭಿನ್ನವಾಗಿರುವುದರಿಂದ ನಿಖರವಾಗಿ ಯಾವ ದಿನ ಅವರು ಮರಳುತ್ತಾರೆ ಎಂಬುದನ್ನು ಹೇಳುವುದು ಕಷ್ಟ ಎಂಬುದು ಬಿಸಿಸಿಐ ಮೂಲಗಳ ಅಭಿಪ್ರಾಯ.
ಇದರ ಜೊತೆಗೆ, ಕೆಲ ಸಂದರ್ಭಗಳಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ನ ಕ್ರೀಡಾ ವಿಜ್ಞಾನ ತಂಡವು ಆಟಗಾರರ ಮರಳುವಿಕೆಯ ಅಂದಾಜು ಅವಧಿಯನ್ನೂ ಸ್ಪಷ್ಟವಾಗಿ ನೀಡಲು ವಿಫಲವಾಗಿದೆ ಎಂಬ ಅಸಮಾಧಾನವಿದೆ. ದೊಡ್ಡ ಸರಣಿಗಳು ಮತ್ತು ಐಸಿಸಿ ಟೂರ್ನಿಗಳಿಗೆ ತಂಡದ ಆಯ್ಕೆ ಹಾಗೂ ಕಾರ್ಯತಂತ್ರ ರೂಪಿಸಲು ಆಟಗಾರರ ಲಭ್ಯತೆಯ ಬಗ್ಗೆ ಆಯ್ಕೆ ಸಮಿತಿ ಮತ್ತು ಕೋಚ್ಗೆ ಮುಂಚಿತ ಮಾಹಿತಿ ಅತ್ಯಗತ್ಯವಾಗಿದೆ.
ಅಫ್ಘಾನಿಸ್ತಾನ ವಿರುದ್ಧ ಸೆಪ್ಟೆಂಬರ್ 13ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿರುವ ತಂಡದಲ್ಲೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಸ್ಪ್ರಿತ್ ಬುಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಅವರನ್ನು ಫಿಟ್ನೆಸ್ಗೆ ಒಳಪಟ್ಟಂತೆ ಪರಿಗಣಿಸಲಾಗಿದೆ. ಈ ಆಟಗಾರರು ‘ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ’ ಪ್ರಕ್ರಿಯೆಯಲ್ಲಿದ್ದಾರೆ.
ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ನಿರ್ಧಾರಗಳು ಅಗತ್ಯ
ಭಾರತ ತಂಡದ ಮುಂದಿನ ಪ್ರಮುಖ ಸವಾಲು ನ್ಯೂಜಿಲೆಂಡ್ ಪ್ರವಾಸವಾಗಿದ್ದು, ಅಕ್ಟೋಬರ್–ನವೆಂಬರ್ ಅವಧಿಯಲ್ಲಿ ಪ್ರವಾಸ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರ ಲಭ್ಯತೆ ಬಗ್ಗೆ ಮುಂಚಿತವಾಗಿ ಸ್ಪಷ್ಟತೆ ಪಡೆಯುವುದು ಬಿಸಿಸಿಐ ಮತ್ತು ತಂಡದ ನಿರ್ವಹಣೆಗೆ ಅನಿವಾರ್ಯವಾಗಿದೆ. ಇಂಗ್ಲೆಂಡ್ ಪ್ರವಾಸದ ಜೂನ್–ಜುಲೈ ಅವಧಿಯ ಕಳಪೆ ಪ್ರದರ್ಶನವೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಆದರೆ ಬಿಸಿಸಿಐ ಕೇವಲ ಹಿಂದಿನ ವೈಫಲ್ಯಗಳ ವಿಶ್ಲೇಷಣೆಗೆ ಸೀಮಿತವಾಗದೆ, ಮುಂದಿನ ವಿಶ್ವಕಪ್ಗಾಗಿ ತಂಡವನ್ನು ಹೇಗೆ ಕಟ್ಟಬೇಕು ಎಂಬುದರತ್ತ ಗಮನ ಹರಿಸಲು ಬಯಸುತ್ತಿದೆ.
ಇದನ್ನೂ ಓದಿ ; ‘ಫೀಲ್ಡಿಂಗ್ ಕೋಚ್ ಬೇಕಿದ್ದಾರೆ’ ಎಂದ ಪಿಸಿಬಿ ; ಲಿಂಕ್ಡ್ಇನ್ ಜಾಹೀರಾತೇ ಪಾಕಿಸ್ತಾನ ಕ್ರಿಕೆಟ್ಗೆ ಹೊಸ ತಲೆನೋವು!



















