ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣ ಪ್ರಕರಣವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಇಂದಿನಿಂದ ಬೃಹತ್ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭಿಸುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ನಡೆಯಲಿರುವ ಈ ಪಾದಯಾತ್ರೆ 10 ದಿನಗಳಲ್ಲಿ ಸುಮಾರು 175 ಕಿಲೋಮೀಟರ್ ಕ್ರಮಿಸಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಲಿಂಗಸುಗೂರಿನ ಬೈಪಾಸ್ ರಸ್ತೆಯ ಜಿ.ಕೆ. ರೆಸಿಡೆನ್ಸಿ ಮುಂಭಾಗದ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಲಿಂಗಸುಗೂರಿನಿಂದ ಆರಂಭವಾಗುವ ಪಾದಯಾತ್ರೆ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದ್ದು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
ವಾಲ್ಮೀಕಿ ನಿಗಮದ ₹187 ಕೋಟಿ ದುರ್ಬಳಕೆಯಾದ ಹಣವನ್ನು ಮತ್ತೆ ನಿಗಮಕ್ಕೆ ಜಮೆ ಮಾಡಬೇಕು ಎಂಬುದು ಬಿಜೆಪಿಯ ಪ್ರಮುಖ ಆಗ್ರಹವಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದರೂ, ಕೇವಲ ರಾಜೀನಾಮೆಯಿಂದ ಪ್ರಕರಣ ಅಂತ್ಯವಾಗುವುದಿಲ್ಲ ಎಂಬುದು ಪ್ರತಿಪಕ್ಷದ ವಾದವಾಗಿದೆ. ಹೀಗಾಗಿ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಿ, ದುರ್ಬಳಕೆಯಾದ ಹಣವನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ.
‘ಬಳ್ಳಾರಿ ಚಲೋ’ ಕೇವಲ ಒಂದು ಪಾದಯಾತ್ರೆಯೇ ಅಥವಾ 2028ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ದಿಕ್ಸೂಚಿಯೇ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. 2028ರಲ್ಲೂ ಅಧಿಕಾರದ ಕನಸು ಕಾಣುತ್ತಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಲೆಕ್ಕಾಚಾರಕ್ಕೆ ಬಿಜೆಪಿ ಪಾದಯಾತ್ರೆ ಅಡ್ಡಿಯಾಗುತ್ತಾ ಎಂಬ ಚರ್ಚೆಯೂ ಆರಂಭವಾಗಿದೆ. ಈಗಾಗಲೇ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಿರುವ ಬಿಜೆಪಿ, ಮುಡಾ ಹಗರಣದ ವಿರುದ್ಧ ಪಾದಯಾತ್ರೆ ನಡೆಸಿ ರಾಜಕೀಯವಾಗಿ ಯಶಸ್ಸು ಕಂಡಿತ್ತು. ಸದನದೊಳಗೂ ಹೋರಾಟ ನಡೆಸಿ ಸಚಿವರ ರಾಜೀನಾಮೆ ಪಡೆಯುವಲ್ಲೂ ಬಿಜೆಪಿ ಯಶಸ್ವಿಯಾಗಿತ್ತು.
ಇದೀಗ ಬಳ್ಳಾರಿ ಚಲೋ ಮೂಲಕ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ಕೇಸರಿ ಪಡೆ ಸಜ್ಜಾಗಿದೆ. ವಿಶೇಷವಾಗಿ ಎಸ್ಟಿ ಸಮುದಾಯದ ಮನ ಗೆಲ್ಲುವಲ್ಲಿ ಈ ಪಾದಯಾತ್ರೆ ಸಹಕಾರಿಯಾಗುತ್ತಾ ಎಂಬ ಕುತೂಹಲವೂ ಇದೆ. ಪಾದಯಾತ್ರೆಯ ಮೂಲಕ ಬಳ್ಳಾರಿ ಭಾಗದಲ್ಲಿ ಬಿಜೆಪಿಯ ರಾಜಕೀಯ ಹಿಡಿತ ಮತ್ತಷ್ಟು ಬಲವಾಗುತ್ತಾ, ಗಣಿಧಣಿಗಳ ಪ್ರಭಾವವಿರುವ ಬಳ್ಳಾರಿ ರಾಜಕಾರಣವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆಗಳು ಎದುರಾಗಿವೆ.
2013ರಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯಲು ಸಿದ್ದರಾಮಯ್ಯ ಅವರಿಗೆ ಚುನಾವಣಾ ಪೂರ್ವ ಪಾದಯಾತ್ರೆಗಳು ರಾಜಕೀಯವಾಗಿ ಸಹಕಾರಿಯಾಗಿದ್ದವು. ಅಂದು ಪಾದಯಾತ್ರೆಯ ಮೂಲಕ ಕಾಂಗ್ರೆಸ್‌ನ ಜನಪ್ರಿಯತೆ ಹೆಚ್ಚಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಬಿಜೆಪಿ ಜನರ ಬಳಿಗೆ ತೆರಳಲು ಮುಂದಾಗಿದೆ. ಮುಡಾ ಪಾದಯಾತ್ರೆಯಂತೆ ಬಳ್ಳಾರಿ ಚಲೋ ಕೂಡ ಬಿಜೆಪಿಗೆ ರಾಜಕೀಯ ಯಶಸ್ಸು ತಂದುಕೊಡುತ್ತಾ, 2028ರ ಚುನಾವಣೆಗೆ ಭದ್ರ ಅಡಿಪಾಯ ಹಾಕುತ್ತಾ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ.
ಇದನ್ನೂ ಓದಿ : ಎಥರ್ ಕೊನಾರ್ಕ್ : 1 ಲಕ್ಷ ರೂಪಾಯಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್.. 161 ಕಿ.ಮೀ.ವರೆಗೆ IDC ವ್ಯಾಪ್ತಿ



















