ಬೆಂಗಳೂರು : ಉದ್ಯಾನವನಗಳ ರಕ್ಷಣೆಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದು, ಮೂಲಸೌಕರ್ಯ ಹಾಗೂ ಇತರ ಯೋಜನೆಗಳ ಹೆಸರಿನಲ್ಲಿ ಹಸಿರು ವಲಯದ ಜಾಗವನ್ನು ಬಳಸಲು ಅವಕಾಶ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ‘ಲಾಲ್‌ಬಾಗ್‌ಗಾಗಿ ಕಾಲ್ನಡಿಗೆ’ ಹೆಸರಿನಲ್ಲಿ ಬೃಹತ್ ಜಾಗೃತಿ ಹಾಗೂ ಪ್ರತಿಭಟನೆ ನಡೆಸಲಾಗಿದೆ.
ಉದ್ಯಾನವನಗಳು ಕೇವಲ ಹಸಿರು ಪ್ರದೇಶಗಳಲ್ಲ. ಅವು ಬೆಂಗಳೂರಿನ ಪರಂಪರೆ, ಹೆಮ್ಮೆ ಮತ್ತು ಭವಿಷ್ಯದ ಭಾಗವಾಗಿವೆ. ವಿಶೇಷವಾಗಿ ಐತಿಹಾಸಿಕ ಲಾಲ್‌ಬಾಗ್‌ನ ಪ್ರತಿಯೊಂದು ಇಂಚು ಹಸಿರಿಗೂ ಮಹತ್ವವಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಅದರ ಜಾಗವನ್ನು ಬಳಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಉದ್ಯಾನವನದ ಶೇ. 5ರಷ್ಟು ಜಾಗವನ್ನು ಮೂಲಸೌಕರ್ಯ ಹಾಗೂ ಇತರ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ತಿದ್ದುಪಡಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ತಿದ್ದುಪಡಿ ಜಾರಿಯಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಸಿರು ಪ್ರದೇಶಗಳು ನಾಶವಾಗುವ ಆತಂಕವಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣ ಎಚ್ಚರಿಸಿದೆ.
ಜನವಿರೋಧಿ ಹಾಗೂ ಪರಿಸರವಿರೋಧಿ ಎಂದು ಆರೋಪಿಸಲಾಗಿರುವ ಈ ತಿದ್ದುಪಡಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಬೆಂಗಳೂರಿನ ಹಸಿರು ಪ್ರದೇಶಗಳು ಮತ್ತು ಐತಿಹಾಸಿಕ ಉದ್ಯಾನವನಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಹೀಂದ್ರಾ ಬಿಇ 6 ಸ್ಪೋರ್ಟೆಕ್ ಸರಣಿ ಪರಿಚಯ



















