ಚೆನ್ನೈ : ಧಾರ್ಮಿಕ ಪ್ರವಾಸಕ್ಕೆಂದು ನೇಪಾಳಕ್ಕೆ ತೆರಳಿ ಭೀಕರ ಪ್ರವಾಹದಿಂದ ಪಾರಾದ ತಮಿಳುನಾಡಿನ 21 ಯಾತ್ರಿಕರ ಗುಂಪೊಂದು ಶುಕ್ರವಾರ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿಳಿದಿದೆ. ಕಣ್ಣೆದುರಲ್ಲೇ ಸಾವು ನರ್ತಿಸುತ್ತಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಸ್ವದೇಶಕ್ಕೆ ಹೆಜ್ಜೆ ಇಟ್ಟ ಯಾತ್ರಿಕರಲ್ಲಿ ಒಂದೆಡೆ ಸಮಾಧಾನವಿದ್ದರೆ, ಮತ್ತೊಂದು ಕಣ್ಣೀರು ಹರಿಯುತ್ತಿತ್ತು. ತಮಗೆ ದೊರೆತ ಈ ಜೀವನ ನಿಜಕ್ಕೂ ‘ಎರಡನೇ ಜನ್ಮ’ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ಮೂರರಲ್ಲಿ 2 ಬಸ್ ಕೊಚ್ಚಿ ಹೋದವು!
ನೇಪಾಳದಲ್ಲಿ ಸಂಭವಿಸಿದ ನೀರ್ಗಲ್ಲು ಸ್ಫೋಟ ಮತ್ತು ಅದರಿಂದ ಸೃಷ್ಟಿಯಾದ ದಿಢೀರ್ ಪ್ರವಾಹ ಯಾತ್ರಿಕರ ವಾಹನಗಳ ಸಾಲಿಗೆ ಅಪ್ಪಳಿಸಿದಾಗ ಏನಾಯಿತು, ಈ ವೇಳೆ ತಾವು ಎದುರಿಸಿದ ನರಕಯಾತನೆಯೇನು ಎಂಬುದನ್ನು ಬದುಕಿ ಬಂದ ವಿಜಯ ಭುವನೇಶ್ವರಿ ಎಂಬವರು ವಿವರಿಸಿದ್ದಾರೆ. “ನಾವು ಮೂರು ಬಸ್ಗಳಲ್ಲಿ ಯಾತ್ರಿಕರೆಲ್ಲ ಸಂಚರಿಸುತ್ತಿದ್ದೆವು. ಏಕಾಏಕಿ ಪ್ರವಾಹ ಅಪ್ಪಳಿಸಿದಾಗ ಬಾಂಬ್ ಸ್ಫೋಟಗೊಂಡಂತೆ ಭಾರೀ ಶಬ್ದವಾಯಿತು. ನಮ್ಮ ವಾಹನದ ಮುಂದೆ ಮತ್ತು ಹಿಂದೆ ಇದ್ದ ಬಸ್ಗಳು ಸಿಲುಕಿಕೊಂಡವು.

ಜೀವ ಉಳಿಸಿಕೊಳ್ಳಲು ನಾವು ಬಸ್ ಮೇಲ್ಛಾವಣಿ ಏರಿದೆವು. ನಂತರ ಹತ್ತಿರದಲ್ಲೇ ಇದ್ದ ಸಶಸ್ತ್ರ ರಿಸರ್ವ್ ಪೊಲೀಸ್ ಕ್ಯಾಂಪ್ ಇದ್ದ ಗುಡ್ಡವನ್ನು ಏರಿ ತಲುಪಿದೆವು. ಅಲ್ಲಿನ ಪೊಲೀಸರು ನಮಗೆ ಆಶ್ರಯ ನೀಡಿ ಜೀವ ಉಳಿಸಿದರು” ಎಂದು ಭೀಕರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. “ಮರಳಿ ಮನೆಗೆ ತಲುಪುತ್ತೇನೆಂಬ ಭರವಸೆ ನನಗಿರಲಿಲ್ಲ. ಪ್ರವಾಹಕ್ಕೆ ಸಿಲುಕಿದ್ದಾಗ ನನಗೆ ನನ್ನ ಮಗಳ ನೆನಪಷ್ಟೇ ಬರುತ್ತಿತ್ತು” ಎಂದು ಹೇಳುತ್ತಾ ಅವರು ಭಾವುಕರಾದರು.
ಬದಲಾಯಿತು ಜೀವನ ದೃಷ್ಟಿಕೋನ
ಈ ಭೀಕರ ಅನುಭವವು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದೆ ಎಂದು ಮತ್ತೊಬ್ಬ ಯಾತ್ರಾರ್ಥಿ ಕಿರುಬಾತಿರಿ ತಿಳಿಸಿದ್ದಾರೆ. “ಇದು ನಮಗೆ ಸಿಕ್ಕ ಹೊಸ ಜನ್ಮ. ಹವಾಮಾನ ವೈಪರೀತ್ಯ ಎಂಬುದು ಸುಳ್ಳಲ್ಲ, ಅದು ಸತ್ಯ. ಇತರರು ಮಾಡುವ ಹವಾಮಾನ ಅಪರಾಧಗಳಿಗೆ ಕೊನೆಗೆ ಬಡವರು ಮತ್ತು ಸಾಮಾನ್ಯರು ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದರು.
ಪ್ರಕೃತಿಯ ರೌದ್ರಾವತಾರವನ್ನು ಕಂಡ ಹಿರಿಯ ನಾಗರಿಕರಾದ ವಳ್ಳಿನಾಯಕಿ ಮಾತನಾಡಿ, “ನಮ್ಮದು ಪವಾಡಸದೃಶ ಪಾರು. ಕಾಂಕ್ರೀಟ್ ಕಟ್ಟಡಗಳು ಹಾಗೂ ಮಣ್ಣು ನಮ್ಮನ್ನು ನುಂಗಲು ಬಂದ ಜ್ವಾಲಾಮುಖಿಯಂತೆ ಭಾಸವಾಗುತ್ತಿತ್ತು” ಎಂದು ಭಯಾನಕ ಕ್ಷಣಗಳನ್ನು ಮೆಲುಕು ಹಾಕಿದರು.
ಚೆನ್ನೈ ವಿಮಾನ ನಿಲ್ದಾಣದಲ್ಲಿ ತಮ್ಮವರನ್ನು ಕಾಣಲು ಕಾದು ಕುಳಿತಿದ್ದ ಕುಟುಂಬಸ್ಥರು ಪ್ರೀತಿಪಾತ್ರರನ್ನು ಕಾಣುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಶ್ರೀರಾಮ್ ಎಂಬವರು ತಮ್ಮ ಅತ್ತೆ ಸುರಕ್ಷಿತವಾಗಿ ಮರಳಿದ್ದನ್ನು ಕಂಡು ನಿಟ್ಟುಸಿರು ಬಿಟ್ಟರು. ಅವರ ಸಣ್ಣ ಮಗಳು ಮಹಾಲಕ್ಷ್ಮಿ ತನ್ನ ಅಜ್ಜಿಯನ್ನು ಪ್ರೀತಿಯಿಂದ ಅಪ್ಪಿಕೊಂಡಳು. ಆದರೆ, ಹಲವು ಕುಟುಂಬಗಳಿಗೆ ಇನ್ನೂ ಆತಂಕ ದೂರವಾಗಿಲ್ಲ. ಪ್ರವೀಣ್ ಎಂಬವರು ತಮ್ಮ ತಂದೆಯ ಸುಳಿವಿಗಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಯಾವುದೇ ಅಧಿಕೃತ ಮಾಹಿತಿ ಸಿಗದೆ ನಿರಾಶೆಯಿಂದ ಹಿಂತಿರುಗಿದರು. “ಕೇಂದ್ರ ಅಥವಾ ರಾಜ್ಯ ಸರ್ಕಾರ ತಕ್ಷಣವೇ ರಕ್ಷಿಸಲ್ಪಟ್ಟವರ ಮತ್ತು ಕಣ್ಮರೆಯಾದವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಸದ್ಯ ತೀವ್ರ ಗೊಂದಲವಿದೆ. ಮರಳಿದವರನ್ನು ಕಂಡು ಸಂತೋಷವಾಗಿದೆ, ಆದರೆ ನಮ್ಮ ತಂದೆಯೂ ಬೇಗ ಮರಳಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ” ಎಂದು ಅವರು ಹೇಳಿದರು.
ನಾಪತ್ತೆಯಾದವರ ಸಂಖ್ಯೆ ಏರಿಕೆ
ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ನೀಡಿರುವ ಮಾಹಿತಿಯಂತೆ, ಈ ಅವಧಿಯಲ್ಲಿ ತಮಿಳುನಾಡಿನಿಂದ ಸುಮಾರು 400 ಯಾತ್ರಿಕರು ನೇಪಾಳಕ್ಕೆ ತೆರಳಿರುವ ಸಾಧ್ಯತೆಯಿದೆ. ಈ ಪೈಕಿ 140 ಜನರು ಸುರಕ್ಷಿತವಾಗಿದ್ದು, ಕನಿಷ್ಠ 80ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ ಎನ್ನಲಾಗಿದೆ. ರಕ್ಷಿಸಲ್ಪಟ್ಟವರನ್ನು ಕಠ್ಮಂಡುವಿಗೆ ಕರೆತಂದು, ಅಲ್ಲಿಂದ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಲು ತಮಿಳುನಾಡು ಸರ್ಕಾರದ ನಾಲ್ವರು ಸಚಿವರ ತಂಡ ದೆಹಲಿಯಲ್ಲಿ ಮೊಕ್ಕಾಂ ಹೂಡಿದೆ. ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಮಾತನಾಡಿ, ಕಣ್ಮರೆಯಾದ ಪ್ರತಿಯೊಬ್ಬರನ್ನೂ ಪತ್ತೆಹಚ್ಚಲು ಸರ್ಕಾರ ಸರ್ವಪ್ರಯತ್ನ ಮಾಡಲಿದೆ ಎಂದಿದ್ದಾರೆ. ಇತ್ತ ಮದ್ರಾಸ್ ಹೈಕೋರ್ಟ್ನಲ್ಲಿಯೂ ಸಂತ್ರಸ್ತರ ನೆರವಿಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ನೇಪಾಳದಲ್ಲಿ ಭಾರಿ ಜೀವಹಾನಿ
ನೇಪಾಳದ ರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರದ ಇತ್ತೀಚಿನ ವರದಿಯಂತೆ, ಜಲಪ್ರಳಯದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 626ಕ್ಕೇರಿದೆ. ಪ್ರವಾಹಕ್ಕೆ ಸಿಲುಕಿ ಕಾಣೆಯಾದ ಸ್ಥಳೀಯರ ಸಂಖ್ಯೆ 2426ಕ್ಕೆ ಏರಿಕೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 517 ವಿದೇಶಿ ಪ್ರಜೆಗಳು ಸೇರಿದಂತೆ ನೂರಾರು ಜನರು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿ ನಿರತವಾಗಿವೆ.
ಇದನ್ನೂ ಓದಿ : ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 6 ಹುದ್ದೆಗಳ ನೇಮಕ : 30 ಸಾವಿರ ರೂ. ಸಂಬಳ


















