ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆ, ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಶಾನ್ ಎಂಬಾತ ಗುಂಡೇಟಿಗೆ ಗಾಯಗೊಂಡ ಆರೋಪಿ. ಸೋಮಸುಂದರಪಾಳ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ ಎಂಬ ಮಾಹಿತಿ ಬಂಡೆಪಾಳ್ಯ ಪೊಲೀಸರಿಗೆ ಸಿಕ್ಕಿತ್ತು.
ಮಾಹಿತಿ ಪಡೆದ ಬಂಡೆಪಾಳ್ಯ ಠಾಣೆ ಪಿಎಸ್‌ಐ ಸಚಿನ್, ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಮಧ್ಯರಾತ್ರಿ ಸುಮಾರು 12.50ರ ವೇಳೆ ಆರೋಪಿಯನ್ನು ಹಿಡಿಯಲು ಮುಂದಾದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ತನ್ನ ಬಳಿ ಇದ್ದ ಆಯುಧದಿಂದ ಸಿಬ್ಬಂದಿ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿದ ಆರೋಪಿ, ಬಳಿಕ ಪಿಎಸ್‌ಐ ಸಚಿನ್ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಆತ್ಮ ರಕ್ಷಣೆಗಾಗಿ ಆರೋಪಿ ಜಿಶಾನ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಹಾಗೂ ಆರೋಪಿ ಜಿಶಾನ್ ಇಬ್ಬರನ್ನೂ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಾಲೇಜು ಸುತ್ತಮುತ್ತ ಹೈಡ್ರೋ ಗಾಂಜಾ ಮಾರಾಟ ಮಾಡ್ತಿದ್ದ ವ್ಯಕ್ತಿ ಬಂಧನ


















