ಬೆಂಗಳೂರು : ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ₹40 ಸಾವಿರ ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸೂಜಿಗಳು, ಸಿರಿಂಜ್‌ಗಳು, ಪ್ಲಾಸ್ಟರ್‌ಗಳು, ಮಾತ್ರೆಗಳ ಡಬ್ಬಗಳು ಸೇರಿದಂತೆ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ರಸ್ತೆಬದಿಯಲ್ಲಿ ಅನಧಿಕೃತವಾಗಿ ಸುರಿಯಲಾಗಿತ್ತು.
ಇಂದು ಬೆಳಿಗ್ಗೆ ಈ ತ್ಯಾಜ್ಯವನ್ನು ಗಮನಿಸಿದ ಪೌರಕಾರ್ಮಿಕರು ಕೂಡಲೇ ಪಾಲಿಕೆಯ ಮಾರ್ಷಲ್‌ಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಾರ್ಷಲ್‌ಗಳು ತ್ಯಾಜ್ಯವನ್ನು ಪರಿಶೀಲಿಸಿದಾಗ, ಅದರಲ್ಲಿ ಹೆಲ್ತ್ ಕೇರ್ ಸೆಂಟರ್‌ನ ಪ್ರಿಸ್ಕ್ರಿಪ್ಷನ್ ಪತ್ರಗಳು ಪತ್ತೆಯಾಗಿದ್ದು, ತ್ಯಾಜ್ಯ ಸುರಿದವರ ಮಾಹಿತಿ ಪತ್ತೆಹಚ್ಚಲು ನೆರವಾಗಿದೆ.
ಮೇಲಾಧಿಕಾರಿಗಳ ನಿರ್ದೇಶನದಂತೆ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು ಸಂಬಂಧಪಟ್ಟ ಹೆಲ್ತ್ ಕೇರ್ ಸೆಂಟರ್ ವಿರುದ್ಧ ಕ್ರಮ ಕೈಗೊಂಡು ಸ್ಥಳದಲ್ಲೇ 40,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಲಾಗಿದೆ.
ವೈದ್ಯಕೀಯ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ಮತ್ತು ಅಧಿಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಮೂಲಕವೇ ವಿಲೇವಾರಿ ಮಾಡಬೇಕು. ನಿಯಮ ಉಲ್ಲಂಘಿಸಿ ರಸ್ತೆಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಕೀಯ ತ್ಯಾಜ್ಯ ಸುರಿಯುವ ಕ್ಲಿನಿಕ್, ಆಸ್ಪತ್ರೆ ಹಾಗೂ ಲ್ಯಾಬ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಂಡು ಭಾರಿ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ತ್ಯಾಜ್ಯ ಸುರಿಯುವವರ ವಿರುದ್ಧ ಪಾಲಿಕೆಯ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.
ಇದನ್ನೂ ಓದಿ : ಹೋಂಡಾ ರೆಬೆಲ್ 300 ಭಾರತದಲ್ಲಿ ಬಿಡುಗಡೆ : ರಾಯಲ್ ಎನ್‌ಫೀಲ್ಡ್‌ಗೆ ನಡುಕ ಹುಟ್ಟಿಸಬಲ್ಲ ಬೈಕ್!



















