ಲಂಡನ್ : ಮಲೇಷ್ಯಾದಲ್ಲಿ ನಡೆದ ಎಸಿಸಿ ಮಹಿಳಾ ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಮೂಲಕ 2026ರ ಮಹಿಳಾ ಏಷ್ಯಾ ಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಹಾಂಗ್ ಕಾಂಗ್ ವನಿತೆಯರ ಕ್ರಿಕೆಟ್ ತಂಡ, ಇದೀಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. 2012ರಲ್ಲಿ ಯಾವುದೇ ಟಿ20 ಅಂತಾರಾಷ್ಟ್ರೀಯ ಮಾನ್ಯತೆ ಇಲ್ಲದೆ ಏಷ್ಯಾ ಕಪ್ ಆಡಿದ್ದ ಹಾಂಗ್ ಕಾಂಗ್, ಆವತ್ತು ಪಾಕಿಸ್ತಾನದ ಎದುರು ಕೇವಲ 15 ರನ್ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತ್ತು. ಆದರೆ ಇಂದು, ಐಸಿಸಿ ಟಿ20 ಮಾನ್ಯತೆ ಪಡೆದು ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಈ ಯುವ ಪಡೆ, ಭಾರತ ಮತ್ತು ಪಾಕಿಸ್ತಾನದಂತಹ ಘಟಾನುಘಟಿ ತಂಡಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ.
ಆಗಸ್ಟ್ 28ರಂದು ಥಾಯ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಹಾಂಗ್ ಕಾಂಗ್, ಸೆಪ್ಟೆಂಬರ್ 3ರಂದು ಭಾರತ ಹಾಗೂ ಸೆಪ್ಟೆಂಬರ್ 7ರಂದು ಪಾಕಿಸ್ತಾನವನ್ನು ‘ಎ’ ಗುಂಪಿನ ಪಂದ್ಯಗಳಲ್ಲಿ ಎದುರಿಸಲಿದೆ. ಈ ಬೃಹತ್ ಸವಾಲನ್ನು ಒಂದು ಸುವರ್ಣ ಅವಕಾಶವಾಗಿ ಬಳಸಿಕೊಳ್ಳಲು ತಂಡದ ನಾಯಕಿ ನತಾಶಾ ಮೈಲ್ಸ್ ತಮ್ಮ ಪಡೆಯನ್ನು ಹುರಿದುಂಬಿಸಿದ್ದಾರೆ.
ಆಟದತ್ತ ಮಾತ್ರ ಗಮನಹರಿಸುವತ್ತ ಚಿತ್ತ
ಏಷ್ಯಾ ಕಪ್ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಎದುರಿಸುವುದು ಯಾವುದೇ ಉದಯೋನ್ಮುಖ ತಂಡಕ್ಕೂ ದೊಡ್ಡ ಸವಾಲು. ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ ಹಾಗೂ ಪಾಕಿಸ್ತಾನದ ಫಾತಿಮಾ ಸನಾರಂತಹ ದಿಗ್ಗಜ ಆಟಗಾರ್ತಿಯರನ್ನು ಎದುರಿಸುವಾಗ ಸಾಮಾನ್ಯವಾಗಿ ಸಣ್ಣ ತಂಡಗಳು ಮಾನಸಿಕವಾಗಿ ಕುಗ್ಗುತ್ತವೆ. ಆದರೆ, ಹಾಂಗ್ ಕಾಂಗ್ ನಾಯಕಿ ನತಾಶಾ ಮೈಲ್ಸ್ ಇದೊಂದು ಅಪರೂಪದ ಅವಕಾಶ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರೊಂದಿಗೆ ನಡೆಸಿದ ಸಂವಾದವೊಂದನ್ನು ನೆನಪಿಸಿಕೊಂಡಿರುವ ನತಾಶಾ, ಎದುರಾಳಿ ಬೌಲರ್ ಅಥವಾ ಬ್ಯಾಟರ್ ಯಾರು ಎಂಬುದರ ಬದಲಾಗಿ ಬರುವ ಚೆಂಡನ್ನು ಹಾಗೂ ಆಟವನ್ನು ಮಾತ್ರ ಆಡಬೇಕು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಎದುರಾಳಿಯ ಖ್ಯಾತಿಗೆ ಬೆದರದೆ, ಯಾವುದೇ ಭಯವಿಲ್ಲದೆ ತಮ್ಮ ನೈಜ ಆಟವನ್ನು ಪ್ರದರ್ಶಿಸಲು ಅವರು ತಂಡಕ್ಕೆ ಕರೆ ನೀಡಿದ್ದಾರೆ.
ಹರ್ಮನ್ಪ್ರೀತ್ ಕೌರ್ ಸವಾಲು
ಹಾಂಗ್ ಕಾಂಗ್ ತಂಡದ ನಾಯಕಿ ನತಾಶಾ ಮೈಲ್ಸ್ ಅವರಿಗೆ ಇಂಗ್ಲೆಂಡ್ ದೇಶೀಯ ಕ್ರಿಕೆಟ್ನಲ್ಲಿ ಆಡಿದ ಅಪಾರ ಅನುಭವವಿದೆ. 2010ರಿಂದ ಮಿಡ್ಲ್ಸೆಕ್ಸ್ ಪರ 150ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಅವರು, ಶಾರ್ಲೆಟ್ ಎಡ್ವರ್ಡ್ಸ್, ಸಾರಾ ಟೇಲರ್ ಮತ್ತು ಹೀದರ್ ನೈಟ್ ಅವರಂತಹ ಇಂಗ್ಲೆಂಡ್ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, 2018ರಲ್ಲಿ ಲಂಕಾಷೈರ್ ಥಂಡರ್ ಪರ ಆಡುವಾಗ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಜೊತೆಗೂ ನತಾಶಾ ಆಡಿದ್ದರು. ಅಂದು ಸಹ ಆಟಗಾರ್ತಿಯಾಗಿದ್ದ ಕೌರ್ ಅವರನ್ನು ಇದೀಗ ಅಂತರಾಷ್ಟ್ರೀಯ ವೇದಿಕೆಯಲ್ಲಿ ಎದುರಾಳಿಯಾಗಿ ಎದುರಿಸುತ್ತಿರುವುದು ನತಾಶಾ ಪಾಲಿಗೆ ಒಂದು ವಿಶಿಷ್ಟ ಸವಾಲಾಗಿದೆ. ಇಂಗ್ಲೆಂಡ್ ಅಂಗಳದಲ್ಲಿ ಕಲಿತ ಪಾಠಗಳು ಹಾಗೂ ಅಗ್ರ ದರ್ಜೆಯ ಕ್ರಿಕೆಟಿಗರೊಂದಿಗಿನ ಒಡನಾಟವನ್ನು ಇದೀಗ ಹಾಂಗ್ ಕಾಂಗ್ ತಂಡವನ್ನು ಮುನ್ನಡೆಸುವಲ್ಲಿ ಹಾಗೂ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ಅವರು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದ್ದಾರೆ.
ತಂಡದ ಬಲ ಮತ್ತು ಮಮತಾ ಮಾಬೆನ್ ಗರಡಿಯ ಪಟ್ಟುಗಳು
ಹಾಂಗ್ ಕಾಂಗ್ ತಂಡವು ಕೇವಲ ಒಬ್ಬ ಆಟಗಾರ್ತಿಯನ್ನು ನೆಚ್ಚಿಕೊಂಡಿಲ್ಲ, ಬದಲಾಗಿ ಒಗ್ಗಟ್ಟಿನ ಪ್ರದರ್ಶನವನ್ನು ನಂಬಿದೆ. ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ್ತಿ ಮಮತಾ ಮಾಬೆನ್ ಪ್ರಸ್ತುತ ಹಾಂಗ್ ಕಾಂಗ್ ತಂಡದ ಮುಖ್ಯ ತರಬೇತುದಾರರಾಗಿದ್ದು, ಆಟಗಾರ್ತಿಯರನ್ನು ಒಗ್ಗೂಡಿಸಿ ಬಲಿಷ್ಠ ಪಡೆಯನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನತಾಶಾ ಶ್ಲಾಘಿಸಿದ್ದಾರೆ.
ತಂಡದಲ್ಲಿ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಮರಿಕೊ ಹಿಲ್ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದಿರುವ ಕ್ಯಾರಿ ಚಾನ್ ಅವರಂತಹ ಪ್ರತಿಭಾವಂತರು ಇದ್ದಾರೆ. ಕ್ಯಾರಿ ಚಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಪಾಯಕಾರಿಯಾಗಿದ್ದಾರೆ. ಇವರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಮರ್ಯಮ್ ಬೀಬಿ ಉತ್ತಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸುತ್ತಿದ್ದು, ಮರಿನಾ ಲ್ಯಾಂಪ್ಲೋ, ಇಕ್ರಾ ಸಹಾರ್ ಹಾಗೂ ಅಲಿಸನ್ ಸಿಯು ಅವರಂತಹ ಭರವಸೆಯ ಆಟಗಾರ್ತಿಯರು ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದ್ದಾರೆ.
ಏಷ್ಯಾ ಕಪ್ ಕೇವಲ ಆರಂಭವಷ್ಟೇ, ಟಿ20 ವಿಶ್ವಕಪ್ ಅಂತಿಮ ಗುರಿ
ಹಾಂಗ್ ಕಾಂಗ್ ಪಾಲಿಗೆ ಏಷ್ಯಾ ಕಪ್ ಕೇವಲ ಒಂದು ಟೂರ್ನಿಯಲ್ಲ, ಬದಲಾಗಿ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೆಟ್ಟಿಲಾಗಿದೆ. 2017, 2022 ಮತ್ತು 2024ರಲ್ಲಿ ಮಹಿಳಾ ಈಸ್ಟ್ ಏಷ್ಯಾ ಕಪ್ ಗೆಲ್ಲುವ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಹಾಂಗ್ ಕಾಂಗ್, ಇದೀಗ ಏಷ್ಯಾ ಮಟ್ಟದಲ್ಲಿ ದೊಡ್ಡ ಹೆಜ್ಜೆ ಇಡಲು ಸಿದ್ಧವಾಗಿದೆ.
ಉನ್ನತ ಮಟ್ಟದ ಟೂರ್ನಿಗಳಲ್ಲಿ ನಿರಂತರವಾಗಿ ಆಡುವ ಮೂಲಕ, ಗೆಲ್ಲುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಹಾಗೂ ಸ್ಥಿರವಾದ ಪ್ರದರ್ಶನ ನೀಡುವುದು ತಂಡದ ಮುಂದಿರುವ ಗುರಿಯಾಗಿದೆ. ಭಾರತದಂತಹ ತಾರಾ ಆಟಗಾರ್ತಿಯರನ್ನೊಳಗೊಂಡ ತಂಡಗಳ ವಿರುದ್ಧ ಆಡುವುದು ಈ ಆಟಗಾರ್ತಿಯರಿಗೆ ಅತ್ಯಮೂಲ್ಯ ಅನುಭವ ನೀಡಲಿದ್ದು, ಈ ಅನುಭವವನ್ನು ಮುಂದಿನ ದಿನಗಳಲ್ಲಿ ಮಹಿಳಾ ಟಿ20 ವಿಶ್ವಕಪ್ನಂತಹ ಬೃಹತ್ ಟೂರ್ನಿಗಳಿಗೆ ಅರ್ಹತೆ ಪಡೆಯಲು ಹಾಂಗ್ ಕಾಂಗ್ ಬಳಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ನಾಯಕಿ ನತಾಶಾ ಮೈಲ್ಸ್ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಂಪರ್ ; ವರ್ಷಕ್ಕೆ 1 ಲಕ್ಷ ರೂ. ಸ್ಕಾಲರ್ಶಿಪ್ ಘೋಷಣೆ



















