ನವದೆಹಲಿ : ದೆಹಲಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಕಾರು ಅಪಘಾತಕ್ಕೀಡಾಗಿದೆ. ದೆಹಲಿಯ ಐಟಿಓ ಪ್ರದೇಶದ ಪಿಡಬ್ಲ್ಯೂಡಿ ಕಚೇರಿ ಬಳಿ ಭಾನುವಾರ ರಾತ್ರಿ ಸುಮಾರು 9.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ಗೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೆಹಲಿ ಆಪ್ ಶಾಸಕ ಅನಿಲ್ ಝಾ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸದ್ಯ ಅಭಯ್ ಪಾಟೀಲ್ ಅವರನ್ನು ದೆಹಲಿಯ ಎಲ್.ಎನ್.ಜೆ.ಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ವಿವರಗಳ ಪ್ರಕಾರ, ಅಶುತೋಷ್ ಪಾಂಡೆ ಎಂಬುವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ವಿರುದ್ಧ ದಿಕ್ಕಿನಲ್ಲಿ ಬಂದು, ಡಿವೈಡರ್ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಶಾಸಕರಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸ್ವಿಫ್ಟ್ ಕಾರಿನಲ್ಲಿದ್ದ ಚಾಲಕ ಅಶುತೋಷ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಇನ್ನೋವಾ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ದೆಹಲಿ ಪೊಲೀಸ್ ಕ್ರೈಮ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ : ಅಹಿಂದ ವೇದಿಕೆ ಪುನರುಜ್ಜೀವನಕ್ಕೆ ಸಿದ್ದು ಮಾಸ್ಟರ್ ಪ್ಲ್ಯಾನ್ ; ಹೊಸ ನಾಯಕತ್ವ ಸೃಷ್ಟಿಗೆ ಲೆಕ್ಕಾಚಾರ


















