ನವದೆಹಲಿ : ದೆಹಲಿಯ ಜಂತರ್ ಮಂತರ್ನಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವಂತೆಯೇ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮೀಸಲಾತಿಯ ಪರವಾಗಿ ಧ್ವನಿ ಎತ್ತಿದ್ದಾರೆ. ಯಾರೋ ಒಬ್ಬರು ಅಥವಾ ಒಂದು ಗುಂಪು ಬೇಡಿಕೆ ಇಟ್ಟ ತಕ್ಷಣವೇ ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ಎಂಬುದು ಸರ್ಕಾರ ಅಥವಾ ಯಾರೊಬ್ಬರು ನೀಡುವ ದಾನವಲ್ಲ; ಬದಲಾಗಿ ನೂರಾರು ವರ್ಷಗಳಿಂದ ಸಾಮಾಜಿಕ ತಾರತಮ್ಯ ಮತ್ತು ಶೋಷಣೆಯನ್ನು ಎದುರಿಸಿಕೊಂಡು ಬಂದಿರುವ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ನೀಡಲಾಗಿರುವ ಮೂಲಭೂತ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಭಾಗ ಎಂದು ಅವರು ಪ್ರತಿಪಾದಿಸಿದ್ದಾರೆ. ದೆಹಲಿಗೆ ತೆರಳುವ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ವ್ಯವಸ್ಥೆಯನ್ನು ಯಾರೋ ಒಬ್ಬರ ಇಷ್ಟಾನಿಷ್ಟಗಳಂತೆ ಹಿಂಪಡೆಯುವ ಅಥವಾ ಜಾರಿಗೊಳಿಸುವ ವಿಷಯವಾಗಿ ನೋಡಬಾರದು ಎಂದು ಚಿರಾಗ್ ಹೇಳಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಹಲವು ಶೋಷಿತ ಸಮುದಾಯಗಳು ತಲೆಮಾರುಗಳಿಂದ ಎದುರಿಸುತ್ತಿರುವ ತಾರತಮ್ಯವನ್ನು ತೊಡೆದುಹಾಕಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂವಿಧಾನದಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಇಂದಿಗೂ ಸಮಾಜದಲ್ಲಿ ತಾರತಮ್ಯದ ಘಟನೆಗಳು ನಡೆಯುತ್ತಲೇ ಇವೆ ಎಂಬುದಕ್ಕೆ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದ ಘಟನೆಯೇ ಸಾಕ್ಷಿ. ಸಮಾಜದಲ್ಲಿ ತಾರತಮ್ಯದ ಮನಸ್ಥಿತಿ ಇನ್ನೂ ಜೀವಂತವಾಗಿರುವುದರಿಂದ ಸಾಮಾಜಿಕ ನ್ಯಾಯದ ಅಗತ್ಯತೆ ಮತ್ತು ಮೀಸಲಾತಿಯ ಪ್ರಸ್ತುತತೆ ಕಮ್ಮಿಯಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಹೆದರದೆ ಸಂವಾದ ನಡೆಸಿ: ಪಾಸ್ವಾನ್ ಸಲಹೆ
ಜಂತರ್ ಮಂತರ್ನಲ್ಲಿ ಮೀಸಲಾತಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಚಿರಾಗ್ ಪಾಸ್ವಾನ್, ಪ್ರತಿಭಟನಾಕಾರರನ್ನು ಕೇವಲ ವಿರೋಧಿಸುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿಗಳು ತಮ್ಮ ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದು, ಸರ್ಕಾರ ಮತ್ತು ಜವಾಬ್ದಾರಿಯುತ ನಾಯಕರು ಅವರೊಂದಿಗೆ ನೇರ ಸಂವಾದ ನಡೆಸಬೇಕು.
ಮೀಸಲಾತಿಯ ಐತಿಹಾಸಿಕ ಹಿನ್ನೆಲೆ, ಅದರ ನಿಜವಾದ ಉದ್ದೇಶ ಮತ್ತು ಇಂದಿನ ಸಮಾಜದಲ್ಲಿ ಅದರ ಅಗತ್ಯ ಏಕೆ ಇದೆ ಎಂಬುದನ್ನು ಮಾತುಕತೆಯ ಮೂಲಕ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಯಾವುದೇ ಸೂಕ್ಷ್ಮ ವಿಷಯವನ್ನಾದರೂ ಪ್ರಜಾಸತ್ತಾತ್ಮಕ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಪಾಸ್ವಾನ್ ಪುನರುಚ್ಚರಿಸಿದ್ದಾರೆ.
ತೇಜಸ್ವಿ ಯಾದವ್ಗೆ ತಿರುಗೇಟು
ಇದೇ ಸಂದರ್ಭದಲ್ಲಿ ಬಿಹಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನೀಡಿದ್ದ ವಿಮರ್ಶಾತ್ಮಕ ಹೇಳಿಕೆಗಳಿಗೆ ಚಿರಾಗ್ ಪಾಸ್ವಾನ್ ಸೂಕ್ತ ತಿರುಗೇಟು ನೀಡಿದ್ದಾರೆ. ವಿಪಕ್ಷಗಳು ಕೇವಲ ಮಾಧ್ಯಮಗಳ ಮುಂದೆ ಆರೋಪ ಮಾಡುವುದನ್ನೇ ಕಾಯಕ ಮಾಡಿಕೊಳ್ಳಬಾರದು. ರಾಜ್ಯದ ಆರ್ಥಿಕತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ವಿಧಾನಸಭೆ ಅಧಿವೇಶನದಲ್ಲಿ ಸೂಕ್ತ ಅಂಕಿ-ಅಂಶಗಳೊಂದಿಗೆ ತಮ್ಮ ವಾದ ಮಂಡಿಸಬೇಕಿತ್ತು ಎಂದು ಟೀಕಿಸಿದ್ದಾರೆ. ಸರ್ಕಾರವು ರಾಜ್ಯದ ಆದಾಯವನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿ ಮಾಡಲು ಹಾಗೂ ಹೂಡಿಕೆಯನ್ನು ಆಕರ್ಷಿಸಲು ನಿರಂತರ ಶ್ರಮಿಸುತ್ತಿದೆ. ಕೇಂದ್ರ ಮತ್ತು ಬಿಹಾರ ರಾಜ್ಯವೆರಡರಲ್ಲೂ ಎನ್ಡಿಎ ಸರ್ಕಾರವೇ ಆಡಳಿತದಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಹಾರವನ್ನು ಆರ್ಥಿಕವಾಗಿ ಮತ್ತಷ್ಟು ಸಬಲಗೊಳಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಇಸ್ರೋದ NSIL ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಲಕ್ಷಾಂತರ ರೂ. ಸಂಬಳದ ಉದ್ಯೋಗ


















