ಟೆನ್ನೆಸ್ಸಿ : ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಮತ್ತು ಸಣ್ಣ ಉದ್ಯಮಿಗಳ ಮೇಲಿನ ಹಿಂಸಾತ್ಮಕ ದಾಳಿಗಳು ಮುಂದುವರಿದಿದ್ದು, ಟೆನ್ನೆಸ್ಸಿ ರಾಜ್ಯದಲ್ಲಿ ನಡೆದ ಭೀಕರ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಗುಜರಾತಿ ಮೂಲದ 62 ವರ್ಷದ ಸುರೇಶ್ ಪಟೇಲ್ ಎಂಬ ಉದ್ಯಮಿಯನ್ನು ಸಶಸ್ತ್ರ ದರೋಡೆಕೋರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದಾಗ ಅವರ 19 ವರ್ಷದ ಮಗಳು ಅಂಗಡಿಯಲ್ಲೇ ಇದ್ದು, ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡು ಆಘಾತಕ್ಕೊಳಗಾಗಿದ್ದಾಳೆ.
ಹೊಸ ಅಂಗಡಿ ಆರಂಭಿಸಿದ 3 ದಿನಕ್ಕೇ ದುರಂತ
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೂಲದ ಸುರೇಶ್ ಪಟೇಲ್, ಟೆನ್ನೆಸ್ಸಿ ರಾಜ್ಯದ ಜಾಕ್ಸನ್ ನಗರದಲ್ಲಿರುವ ‘ರಿಡ್ಜ್‌ಕ್ರೆಸ್ಟ್ ಸೆಲ್ಲಾರ್ಸ್ ವೈನ್ ಆ್ಯಂಡ್ ಸ್ಪಿರಿಟ್ಸ್’ (Ridgecrest Cellars Wine & Spirits) ಅಂಗಡಿಯನ್ನು ನಡೆಸುತ್ತಿದ್ದರು. ಕಳೆದ ಸೋಮವಾರವಷ್ಟೇ ಅವರು ಈ ಅಂಗಡಿಯನ್ನು ಖರೀದಿಸಿ, ನೂತನ ಮಾಲೀಕರಾಗಿ ನಿರ್ವಹಣೆ ಮಾಡುತ್ತಿದ್ದರು. ಉದ್ಯಮ ಆರಂಭಿಸಿದ ಕೇವಲ ಮೂರನೇ ದಿನಕ್ಕೆ (ಗುರುವಾರ ರಾತ್ರಿ 9 ಗಂಟೆಗೆ) ಈ ದುರಂತ ಸಂಭವಿಸಿದೆ. ದಾಳಿಯ ವೇಳೆ ಅಂಗಡಿಯಲ್ಲಿದ್ದ 70 ವರ್ಷದ ಹಿರಿಯ ಮಹಿಳಾ ಸಿಬ್ಬಂದಿಯೊಬ್ಬರು ಭಯದಿಂದ ಕೆಳಗೆ ಬಿದ್ದು ಮಣಿಕಟ್ಟು ಮುರಿದುಕೊಂಡಿದ್ದಾರೆ.
ಆಗಿದ್ದೇನು?
ಮುಖವಾಡ ಧರಿಸಿ ಅಂಗಡಿಗೆ ನುಗ್ಗಿದ ದರೋಡೆಕೋರ ಬಂದೂಕು ತೋರಿಸಿ ಹಣ ನೀಡುವಂತೆ ಬೆದರಿಸಿದ್ದಾನೆ. ಸಿಬ್ಬಂದಿ ಹಣ ನೀಡಿದ ಮೇಲೂ ಆತ ಮನಬಂದಂತೆ ಹಲವು ಸುತ್ತು ಗುಂಡು ಹಾರಿಸಿದ್ದು, ಸುರೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಯು ಪೇಂಟ್‌ಬಾಲ್ ಮಾದರಿಯ ಮುಖವಾಡ ಧರಿಸಿದ್ದು, ಬೂದು ಬಣ್ಣದ ಅಂಗಿ, ಜೀನ್ಸ್ ಹಾಗೂ ಕಪ್ಪು ಬೂಟುಗಳನ್ನು ತೊಟ್ಟಿದ್ದ ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಪರಾರಿಯಾಗಿದ್ದು, ಆತನ ಬಳಿ ಮಾರಕ ಶಸ್ತ್ರಾಸ್ತ್ರಗಳಿರುವುದರಿಂದ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಆತಂಕದಲ್ಲಿ ಭಾರತೀಯರು
ಜಾಕ್ಸನ್ ಪೊಲೀಸ್ ಇಲಾಖೆಯು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರೆ ನೀಡುವಂತೆ ಕೋರಲಾಗಿದೆ. ಇದು ಕೇವಲ ದರೋಡೆಯೋ ಅಥವಾ ಬೇರೇನಾದರೂ ಉದ್ದೇಶವಿತ್ತೇ ಎಂಬ ಕೋನದಲ್ಲೂ ತನಿಖೆ ಸಾಗಿದೆ.
ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಗುಜರಾತಿ ಮೂಲದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳು ನಡೆಯುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಹಿಂದೆ ಟೆನ್ನೆಸಿಯಲ್ಲಿ ಪರೇಶ್ ‘ಪ್ರಿನ್ಸ್’ ಪಟೇಲ್, ವರ್ಜೀನಿಯಾದಲ್ಲಿ ಮೇಘನಾ ಪಟೇಲ್ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಕಿರಣ್ ಪಟೇಲ್ ಅವರನ್ನು ಇದೇ ರೀತಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಸುರೇಶ್ ಪಟೇಲ್ ಅವರ ಹತ್ಯೆಯು ಭಾರತೀಯ ಸಮುದಾಯದಲ್ಲಿ ಮತ್ತೆ ಭಯದ ವಾತಾವರಣ ನಿರ್ಮಿಸಿದೆ.
ಇದನ್ನೂ ಓದಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ 450 ಎಂಜಿನಿಯರ್‌ಗಳ ನೇಮಕಾತಿ : 1.6 ಲಕ್ಷ ರೂ. ಸ್ಯಾಲರಿ



















