ಬೆಂಗಳೂರು : ಮದುವೆಯಾದ ಬಳಿಕವೂ ಪಾಗಲ್ ಪ್ರೇಮಿಯೊಬ್ಬ ಕಾಟ ನೀಡುತ್ತಿದ್ದ ಹಿನ್ನೆಲೆ ಬೇಸತ್ತ 21 ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರದ ಲಕ್ಷ್ಮೀಪುರಂನಲ್ಲಿ ನಡೆದಿದೆ. ಕವಿತಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಪಾಗಲ್ ಪ್ರೇಮಿ ಕಿರಣ್‌ನ ಕಾಟದ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ಕಿರಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕವಿತಾಳನ್ನು ಆಕೆಯ ಸಂಬಂಧಿಕ ರಾಜು ಎಂಬುವರ ಜೊತೆ ಮೇ 2024ರಲ್ಲಿ ಮದುವೆ ಮಾಡಲಾಗಿತ್ತು. ಕವಿತಾ ಮತ್ತು ರಾಜು ದಂಪತಿಗೆ ಒಂದೂವರೆ ವರ್ಷದ ಮಗು ಕೂಡ ಇದೆ. ಆದರೆ ಮದುವೆಗೂ ಮುನ್ನವೇ ಕಿರಣ್ ಕವಿತಾಳನ್ನು ಪ್ರೀತಿಸುವುದಾಗಿ ಹೇಳಿಕೊಂಡು ಸುಮಾರು ಮೂರು ವರ್ಷಗಳಿಂದ ಆಕೆಯ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದಿದ್ದ ಕವಿತಾಳ ಕುಟುಂಬಸ್ಥರು ಕಿರಣ್‌ಗೆ ಬುದ್ಧಿವಾದ ಹೇಳಿದ್ದರು. ಬಳಿಕ 2024ರಲ್ಲಿ ಕವಿತಾಳನ್ನು ರಾಜು ಜೊತೆ ಮದುವೆ ಮಾಡಲಾಗಿತ್ತು.
ಇತ್ತೀಚೆಗೆ ಮತ್ತೆ ಕಿರಣ್ ಕವಿತಾಗೆ ಕಾಟ ನೀಡಲು ಆರಂಭಿಸಿದ್ದ ಎನ್ನಲಾಗಿದೆ. “ನೀನು ನನಗೆ ಮೆಸೇಜ್ ಮಾಡದಿದ್ದರೆ ಸಾಯುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದ ಕಿರಣ್, “ನನ್ನ ನೆಮ್ಮದಿ ಹಾಳು ಮಾಡಿದ ನಿನ್ನ ಜೀವನವನ್ನೂ ಹಾಳು ಮಾಡುತ್ತೇನೆ” ಎಂದು ಮೆಸೇಜ್ ಮಾಡಿ ಕವಿತಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಚಾರವನ್ನು ಪತಿ ರಾಜು ಕವಿತಾಳ ಪೋಷಕರಿಗೂ ತಿಳಿಸಿದ್ದ. ಗಂಡ ಹಾಗೂ ಮನೆಯವರಿಗೆ ತನ್ನ ಮತ್ತು ಕಿರಣ್ ನಡುವಿನ ವಿಚಾರ ತಿಳಿದುಬಂದಿದ್ದರಿಂದ ಕವಿತಾ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಕಳೆದ 6ನೇ ತಾರೀಖು ಕವಿತಾ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕವಿತಾಳ ಮೊಬೈಲ್ ಪರಿಶೀಲಿಸಿದಾಗ ಕಿರಣ್ ನಿರಂತರವಾಗಿ ಮೆಸೇಜ್ ಮಾಡಿ ಕಾಟ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕಿರಣ್‌ನ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಫ್ರೆಶರ್‌ಗಳಿಗೆ ಶುಭ ಸಮಾಚಾರ : ಕೇಂದ್ರ ಸರ್ಕಾರದ BEML ಸಂಸ್ಥೆಯಲ್ಲಿ ನೇಮಕಾತಿ



















