ಹೈದರಾಬಾದ್ : ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಹಾಗೂ ನಿರ್ದೇಶಕಿಯಾಗಿದ್ದ ಕಲ್ಲು ರೂಪಾ ರೆಡ್ಡಿ (48) ಅವರ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೋಲಿಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಆಗಸ್ಟ್ 12ರ ಬೆಳಗ್ಗೆ ತಮ್ಮ ಮನೆಯಲ್ಲೇ 27 ಬಾರಿ ಚಾಕುವಿನಿಂದ ಇರಿಯಲ್ಪಟ್ಟು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದ ರೂಪಾ ರೆಡ್ಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರದ್ದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಬಾಬು’ ಪದ ಕೊಟ್ಟ ಸುಳಿವು
ಪ್ರಾಂಶುಪಾಲೆಯ ಹತ್ಯೆಯು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಈ ಕುರಿತ ತನಿಖೆಗೆ ಐದು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು 80ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಪರಿಶೀಲಿಸುವಾಗ ಪ್ರಮುಖ ಸುಳಿವೊಂದು ಲಭ್ಯವಾಯಿತು. ರೂಪಾ ರೆಡ್ಡಿ ಅವರು ಕೊಲೆಯಾಗುವ ಕೆಲವೇ ಕ್ಷಣಗಳ ಮೊದಲು ತಮ್ಮ ಅತ್ತೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆ ಸಂಭಾಷಣೆ ಹಠಾತ್ ಸ್ಥಗಿತಗೊಳ್ಳುವ ಮುನ್ನ ರೂಪಾ ಅವರು ‘ಬಾಬು’ ಎಂಬ ಪದವನ್ನು ಬಳಸಿರುವುದು ಕಂಡುಬಂದಿತ್ತು. ಪ್ರಾಂಶುಪಾಲೆ ಸಾಮಾನ್ಯವಾಗಿ ಶಾಲೆಯ ವಿದ್ಯಾರ್ಥಿಗಳನ್ನು ಮಮತೆಯಿಂದ ‘ಬಾಬು’ ಎಂದು ಕರೆಯುತ್ತಿದ್ದುದು ಗೊತ್ತಾದ ಕಾರಣ, ಪೊಲೀಸರ ತನಿಖೆಯ ಗಮನ ಶಾಲಾ ಮಕ್ಕಳತ್ತ ತಿರುಗಿತು.

ವಿಲಾಸಿ ಜೀವನದ ಹುಚ್ಚಿಗೆ ಪ್ರಾಂಶುಪಾಲೆಯನ್ನೇ ಕೊಂದರು!
ಶಾಲೆಯ ವಿದ್ಯಾರ್ಥಿಗಳ ಮೇಲೆ ತನಿಖೆಯನ್ನು ಕೇಂದ್ರೀಕರಿಸಿ, ನಿಗಾ ವಹಿಸಿದ ಪೊಲೀಸರು, ಇತ್ತೀಚೆಗೆ ಗೈರುಹಾಜರಾಗಿದ್ದ ಐದು ಜನ 10ನೇ ತರಗತಿಯ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಹಠಾತ್ತಾಗಿ ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು ಹಾಗೂ ಗೆಳೆಯರಿಗೆ ಪಾರ್ಟಿಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ನಲ್ಗೊಂಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಪವಾರ್ ನೇತೃತ್ವದ ತಂಡ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆಯ ವಿಚಾರ ಬಾಯಿಬಿಟ್ಟಿದ್ದಾರೆ.

ಹಳೆಯ ದ್ವೇಷ, ಕಳವಿನ ಸಂಚು
ಆರೋಪಿ ವಿದ್ಯಾರ್ಥಿಗಳು ಈ ಹಿಂದೆ ಶಾಲೆಯ ಹಾಸ್ಟೆಲ್‌ನಲ್ಲಿದ್ದಾಗ ಅವರ ಬ್ಯಾಗ್‌ನಲ್ಲಿ ಹಣ ಮತ್ತು ಮೊಬೈಲ್ ಪತ್ತೆಯಾಗಿದ್ದವು. ಆಗ ಪ್ರಾಂಶುಪಾಲೆ ರೂಪಾ ರೆಡ್ಡಿ ಅವರು ಪೋಷಕರಿಗೆ ದೂರು ನೀಡಿ, ಅವರನ್ನು ಹಾಸ್ಟೆಲ್‌ನಿಂದ ಡೇ-ಸ್ಕಾಲರ್‌ಗಳಾಗಿ ಬದಲಾಯಿಸಿದ್ದರು. ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಪ್ರಾಂಶುಪಾಲೆಯ ಬಳಿ ಹೆಚ್ಚಿನ ಹಣವಿರುತ್ತದೆ ಎಂದು ಭಾವಿಸಿ ಕಳವು ಮಾಡಲು ಸಂಚು ರೂಪಿಸಿದ್ದರು. ಯೂಟ್ಯೂಬ್‌ನಲ್ಲಿ “ಸುಲಭವಾಗಿ ಹಣ ಗಳಿಸುವುದು ಹೇಗೆ” ಎಂದು ಹುಡುಕಾಡಿದ್ದ ಆರೋಪಿಗಳು, ಕೈಗವಸು (ಗ್ಲೌಸ್) ಹಾಗೂ ಕತ್ತಿಯನ್ನು ಖರೀದಿಸಿ ಐದು ದಿನಗಳ ಕಾಲ ಮನೆ ಸುತ್ತಲೂ ಪರಿಶೀಲನೆ ನಡೆಸಿದ್ದರು.
ಆಕಸ್ಮಿಕವಾಗಿ ಸಿಕ್ಕಿಬಿದ್ದು ಭೀಕರ ಕೃತ್ಯ
ಘಟನೆ ನಡೆದ ದಿನ ಒಬ್ಬ ವಿದ್ಯಾರ್ಥಿ ಮಂಕಿ ಕ್ಯಾಪ್ ಮತ್ತು ಗ್ಲೌಸ್ ಧರಿಸಿ ಅಡುಗೆಮನೆಯ ಮೂಲಕ ಮನೆ ಪ್ರವೇಶಿಸಿ, ಬೆಡ್‌ರೂಮ್‌ನಲ್ಲಿದ್ದ 2.50 ಲಕ್ಷ ರೂ.ಗಳನ್ನು ದೋಚಿದ್ದ. ಆದರೆ, ಓಡಿಹೋಗುವ ಯತ್ನದಲ್ಲಿ ಆತನ ಮಂಕಿ ಕ್ಯಾಪ್ ಜಾರಿಬಿದ್ದು, ರೂಪಾ ರೆಡ್ಡಿ ಅವರು ಆತನನ್ನು ಗುರುತಿಸಿದ್ದಾರೆ. ಪೊಲೀಸರಿಗೆ ದೂರು ನೀಡಬಹುದು ಎಂಬ ಭಯದಿಂದ ಆತ ತಂದಿದ್ದ ಚಾಕುವಿನಿಂದ ರೂಪಾ ರೆಡ್ಡಿ ಅವರಿಗೆ 27 ಬಾರಿ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯ ನಂತರ ಆರೋಪಿಗಳು ರಕ್ತಸಿಕ್ತ ಬಟ್ಟೆಗಳು ಮತ್ತು ಮಂಕಿ ಕ್ಯಾಪ್‌ಗಳನ್ನು ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ದೋಚಿದ ಹಣದಲ್ಲಿ 60,000 ಮೌಲ್ಯದ ಐಫೋನ್ (iPhone) ಖರೀದಿಸಿ, ಗೋವಾ ಪ್ರವಾಸಕ್ಕೂ ತೆರಳಿದ್ದರು. ಬಂಧಿತ ಆರೋಪಿಗಳಿಂದ ರಕ್ತದ ಕಲೆಯಿದ್ದ ನೋಟುಗಳು ಸೇರಿದಂತೆ 1.54 ಲಕ್ಷ ರೂ. ನಗದು, ಖರೀದಿಸಿದ ಐಫೋನ್ ಹಾಗೂ ಮೃತರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಫ್ಲ್ಯಾಟ್ ಖರೀದಿಗೂ ಮುನ್ನ ಯೋಚಿಸಿ ; ನಿಮ್ಮ ಸಂಬಳದಲ್ಲಿ EMI ಪ್ರಮಾಣ ಎಷ್ಟಿರಬೇಕು ಗೊತ್ತಾ?



















