ಬೆಂಗಳೂರು : ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ (BMICP/NICE Project)ನಲ್ಲಿ ಭೂಸ್ವಾಧೀನ, ಹೆಚ್ಚುವರಿ ಭೂ ಹಸ್ತಾಂತರ, FWA ಉಲ್ಲಂಘನೆ, ಭೂಮಿಯ ವಾಣಿಜ್ಯ ಬಳಕೆ, ಕೆರೆ-ಕಟ್ಟೆಗಳ ಜಮೀನು ಹಸ್ತಾಂತರ, ಟೋಲ್ ಶುಲ್ಕ ಹೆಚ್ಚಳ ಹಾಗೂ ಯೋಜನಾ ಆಸ್ತಿಗಳ ಮೌಲ್ಯೀಕರಣ ಸೇರಿದಂತೆ ಸಾರ್ವಜನಿಕ ಹಣ ಮತ್ತು ಆಸ್ತಿಗೆ ಸಂಬಂಧಿಸಿದ ಗಂಭೀರ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಿಬಿಐ ಭ್ರಷ್ಟಾಚಾರ ನಿಗ್ರಹ ಶಾಖೆಯ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿರುವ ಅವರು, ಪ್ರಕರಣದಲ್ಲಿ Preliminary Enquiry ನಡೆಸಿ, ಅಪರಾಧದ ಅಂಶಗಳು ಕಂಡುಬಂದರೆ FIR ದಾಖಲಿಸುವಂತೆ ಹಾಗೂ ಸಂಪೂರ್ಣ Forensic Audit ನಡೆಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ Division Bench 29.07.2026ರಂದು W.A.No.1214/2025 ಹಾಗೂ ಸಂಬಂಧಿತ ಪ್ರಕರಣಗಳಲ್ಲಿ ನೀಡಿರುವ ತೀರ್ಪನ್ನು ಮನವಿಯಲ್ಲಿ ಉಲ್ಲೇಖಿಸಿರುವ ದಿನೇಶ್ ಕಲ್ಲಹಳ್ಳಿ, 1998ರಿಂದ 2009ರವರೆಗೆ BMICPಗಾಗಿ ಸುಮಾರು 20,193 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಹಲವು ಭೂಮಿಗಳಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಪರಿಹಾರದ Award ನೀಡದಿರುವುದನ್ನೂ ನ್ಯಾಯಾಲಯ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ Contempt Petition (Civil) No.139/2012ರಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 554 ಎಕರೆ ಹೆಚ್ಚುವರಿ ಭೂಮಿಯನ್ನು NICEಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿತ್ತು ಎಂಬ ಅಂಶವೂ ನ್ಯಾಯಾಲಯದ ದಾಖಲೆಗಳಲ್ಲಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಕೆಲವು ಭೂಮಿಗಳು Expressway, Peripheral Road, Link Road, Toll Plaza ಮತ್ತು Interchange ಸೇರಿದಂತೆ ಯೋಜನೆಯ ಘಟಕಗಳಿಗೆ ಬಳಸಲಾಗಿಲ್ಲ ಎಂಬ ಅಂಶವೂ ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖವಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ. Compulsory Acquisition ಮೂಲಕ ಪಡೆದ ಭೂಮಿಗಳು ನಂತರ ವಾಣಿಜ್ಯ ವ್ಯವಹಾರಗಳು, ಭೂ ಬಳಕೆ ಬದಲಾವಣೆ, Joint Development Agreements, ಮಾರಾಟ ವ್ಯವಹಾರಗಳು ಹಾಗೂ Project Assets Capitalisation ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿರುವುದರ ಬಗ್ಗೆ prima facie ಅಂಶಗಳಿವೆ ಎಂದು ಹೈಕೋರ್ಟ್ ಗಮನಿಸಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, FWAಯಲ್ಲಿ ರಾಜ್ಯ ಸರ್ಕಾರದ ಪೂರ್ವಾನುಮತಿ ಅಗತ್ಯವಿದ್ದರೂ ವಿವಿಧ ಸಂದರ್ಭಗಳಲ್ಲಿ ಟೋಲ್ ಶುಲ್ಕ ಹೆಚ್ಚಿಸಿರುವುದರ ಬಗ್ಗೆಯೂ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿವಿಧ ಗ್ರಾಮಗಳ ಕೆರೆ ಮತ್ತು ಕಟ್ಟೆ ಪ್ರದೇಶದ ಜಮೀನುಗಳನ್ನು NICEಗೆ ಹಸ್ತಾಂತರಿಸಿರುವುದು, ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಪಾವತಿಯಲ್ಲಿ ವಿಳಂಬ, ಭೂಮಿಯನ್ನು ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿ ಬಳಸಿರುವ ಆರೋಪಗಳು ಹಾಗೂ ಸಾರ್ವಜನಿಕ ಆಸ್ತಿಗಳ ಬಳಕೆಗೆ ಸಂಬಂಧಿಸಿದ ವಿಚಾರಗಳನ್ನೂ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ. ಹೈಕೋರ್ಟ್ ಸ್ವತಂತ್ರ ತಜ್ಞರ ತಂಡದಿಂದ ಯೋಜನೆಯ ಖಾತೆಗಳ Forensic Audit ನಡೆಸಿ, ವಂಚನೆ ಹಾಗೂ ಇತರ ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿರುವುದನ್ನೂ ಅವರು ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ BMICP/NICE ಯೋಜನೆಗಾಗಿ ಎಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ, ಅದರಲ್ಲಿ ಎಷ್ಟು ಭೂಮಿ ನಿಜವಾಗಿಯೂ ಯೋಜನೆಗೆ ಬಳಕೆಯಾಗಿದೆ, 554 ಎಕರೆ ಹೆಚ್ಚುವರಿ ಭೂಮಿಯನ್ನು ಯಾವ ಪ್ರಕ್ರಿಯೆಯ ಮೂಲಕ ಹಸ್ತಾಂತರಿಸಲಾಗಿದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. NICE ಹಾಗೂ ಸಂಬಂಧಿತ ಸಂಸ್ಥೆಗಳ Annual Reports, Audited Accounts, Balance Sheets, Land Records, Sale Deeds, JDA ದಾಖಲೆಗಳು, Toll Revenue ಹಾಗೂ Project Asset Valuation ದಾಖಲೆಗಳನ್ನು ಪರಿಶೀಲಿಸಬೇಕು. ಜೊತೆಗೆ KIADB, BMICAPA, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕಂದಾಯ ಇಲಾಖೆ, ವಿಶೇಷ ಭೂಸ್ವಾಧೀನ ಅಧಿಕಾರಿಗಳು ಹಾಗೂ NICE ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇನ್ನು, ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರವೇ ತನಿಖೆಯ ವ್ಯಾಪ್ತಿಗೆ ಬರುವುದರಿಂದ ರಾಜ್ಯದ ಸಾಮಾನ್ಯ ಇಲಾಖಾ ತನಿಖೆ ಮಾತ್ರ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ಸ್ವತಂತ್ರ ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐನಿಂದ Preliminary Enquiry ನಡೆಸಿ, ಅಗತ್ಯವಿದ್ದರೆ FIR ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
554 ಎಕರೆ ಹೆಚ್ಚುವರಿ ಭೂಮಿ ಹಸ್ತಾಂತರ, ಕೆರೆ-ಕಟ್ಟೆ ಜಮೀನುಗಳ ಹಸ್ತಾಂತರ, FWAಗೆ ವಿರುದ್ಧವಾಗಿ ಟೋಲ್ ಶುಲ್ಕ ಪರಿಷ್ಕರಣೆ, ಭೂ ಬಳಕೆ ಬದಲಾವಣೆ, ವಾಣಿಜ್ಯ ಬಳಕೆ ಹಾಗೂ Project Assets Capitalisation ಸೇರಿದಂತೆ ಎಲ್ಲಾ ಅಂಶಗಳನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಂಡು, ಸಾರ್ವಜನಿಕ ಆಸ್ತಿ ಅಥವಾ ಸರ್ಕಾರಕ್ಕೆ ಸೇರಿದ Project Assets ಮತ್ತಷ್ಟು ವರ್ಗಾವಣೆಯಾಗದಂತೆ ರಕ್ಷಿಸಬೇಕು ಹಾಗೂ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸದನಲ್ಲಿ ‘ಹನೂರು ಎನ್‌ಕೌಂಟರ್’ ಸದ್ದು ; ಇದು ಕೊಲೆ ಎಂದು ವಿಪಕ್ಷ ಆಕ್ರೋಶ.. ಉತ್ತರ ಕೊಟ್ಟ ಸರ್ಕಾರ!


















