ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ “ಜಿರಳೆ” ಹೇಳಿಕೆಯಿಂದ ಕಾಕ್ರೋಚ್ ಜನತಾ ಪಾರ್ಟಿ ಜನ್ಮತಾಳಿದ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿಯವರ “ದಿಮಾಗಿ ನಕ್ಸಲ್”(ಬೌದ್ಧಿಕ ನಕ್ಸಲರು) ಹೇಳಿಕೆಯಿಂದಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ‘ದಿಮಾಗಿ ನಕ್ಸಲ್ ಪಾರ್ಟಿ’ (Dimagi Naxal Party) ಹೆಸರಿನ ಖಾತೆಯೊಂದು ಹಠಾತ್ತಾಗಿ ಪ್ರತ್ಯಕ್ಷಗೊಂಡಿದೆ. ಇದು ಆರಂಭವಾದ ಕೇವಲ 24 ಗಂಟೆಗಳಲ್ಲಿ 1.6 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ಭಾರಿ ಸಂಚಲನ ಮೂಡಿಸಿದೆ.
ಇನ್‌ಸ್ಟಾಗ್ರಾಮ್ ಮಾಹಿತಿ ಪ್ರಕಾರ, ಈ ಖಾತೆಯನ್ನು ಇದೇ ತಿಂಗಳು ತೆರೆಯಲಾಗಿದ್ದು, ಇದುವರೆಗೆ ಒಮ್ಮೆ ಬಳಕೆದಾರರ ಹೆಸರು (Username) ಬದಲಾವಣೆಗೊಂಡಿದೆ. ಪ್ರಸ್ತುತ ಈ ಖಾತೆಯಲ್ಲಿ 62 ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದ್ದು, ಖಾತೆಯು ಸುಮಾರು 35 ಜನರನ್ನು ಫಾಲೋ ಮಾಡುತ್ತಿದೆ. ಆದರೆ, ಈ ಸಾಮಾಜಿಕ ಜಾಲತಾಣದ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟವಾದ ವಿವರಗಳು ಲಭ್ಯವಾಗಿಲ್ಲ.
ಪ್ರಧಾನಿ ಮೋದಿಯವರ ಭಾಷಣದ ಬೆನ್ನಲ್ಲೇ ಸೃಷ್ಟಿ
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡುವಾಗ ‘ದಿಮಾಗಿ ನಕ್ಸಲ್’ (ಬೌದ್ಧಿಕ ನಕ್ಸಲರು) ಎಂಬ ಪದವನ್ನು ಉಲ್ಲೇಖಿಸಿದ್ದರು. ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಅನ್ನು ಯಶಸ್ವಿಯಾಗಿ ಮಟ್ಟಹಾಕಲಾಗಿದೆ. ಆದರೆ, ಹಿಂಸಾಚಾರ ಮತ್ತು ಅರಾಜಕತೆಯನ್ನು ಹರಡಲು ಹೊಂಚು ಹಾಕುತ್ತಿರುವ ‘ದಿಮಾಗಿ ನಕ್ಸಲರು’ ಇನ್ನೂ ಸಮಾಜದಲ್ಲಿ ಸಕ್ರಿಯರಾಗಿದ್ದು, ಅವರನ್ನು ಗುರುತಿಸಿ ಪ್ರತ್ಯೇಕಿಸಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದ್ದರು. ಪ್ರಧಾನಿಯವರ ಈ ಹೇಳಿಕೆಯ ಬೆನ್ನಲ್ಲೇ ಈ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಸೃಷ್ಟಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮೆಟಾ ಕಂಪನಿಯ ನೀತಿಗಳ ಮೇಲಿನ ಚರ್ಚೆ
ಇನ್‌ಸ್ಟಾಗ್ರಾಮ್ ಸಂಸ್ಥೆಯು ಮಾರ್ಕ್ ಜುಕರ್‌ಬರ್ಗ್ ಒಡೆತನದ ಅಮೆರಿಕದ ಪ್ರಸಿದ್ಧ ‘ಮೆಟಾ’ (Meta) ಕಂಪನಿಯ ನಿಯಂತ್ರಣದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಸೇರಿದಂತೆ ತನ್ನ ವೇದಿಕೆಗಳ ನಿಯಮಾವಳಿ ಮತ್ತು ನಿರ್ವಹಣೆಯಲ್ಲಾದ ಲೋಪದೋಷಗಳ ಕುರಿತು ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದರು. ಇದರ ಮಧ್ಯೆಯೇ ಇಂತಹ ವಿಚಿತ್ರ ಮತ್ತು ಸಂಚಲನಾತ್ಮಕ ಖಾತೆಗಳು ರಾತ್ರೋರಾತ್ರಿ ಲಕ್ಷಾಂತರ ಫಾಲೋವರ್ಸ್ ಪಡೆಯುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು ; ಕೊಲೆ ಶಂಕೆ.. ಪತ್ನಿ ವಶಕ್ಕೆ



















