ವಿಜಯನಗರ : ಸೊಸೈಟಿಗೆ ಬರಬೇಕಿದ್ದ ಯೂರಿಯಾ ಗೊಬ್ಬರ ದಾರಿ ಮಧ್ಯೆಯೇ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ರೈತರು ಸೊಸೈಟಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ಈ ಆರೋಪ ಕೇಳಿಬಂದಿದೆ. ಆಗಸ್ಟ್ 4ರಂದು ಹೊಸಪೇಟೆಯಿಂದ ಹಾರಕನಾಳು ಸೊಸೈಟಿಗೆ ಒಂದು ಲೋಡ್ ಯೂರಿಯಾ ಗೊಬ್ಬರ ಕಳುಹಿಸಲಾಗಿತ್ತು. ಆದರೆ ಗೊಬ್ಬರ ಸೊಸೈಟಿಗೆ ತಲುಪುವ ಮುನ್ನವೇ ದಾರಿ ಮಧ್ಯದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಸೊಸೈಟಿ ಡೈರೆಕ್ಟರ್ ನೇತೃತ್ವದಲ್ಲಿ ದಾರಿ ಮಧ್ಯೆಯೇ ಗೊಬ್ಬರ ಹಂಚಿಕೆ ಮಾಡಲಾಗಿದ್ದು, ಸೊಸೈಟಿ ಸೆಕ್ರೆಟರಿ ಅವರ ಅನುಮತಿ ಇಲ್ಲದೇ ಗೊಬ್ಬರ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಗೊಬ್ಬರ ಮಾರಾಟ ಮಾಡಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳ ಸ್ಪಷ್ಟನೆ
ದಾರಿ ಮಧ್ಯೆ ಗೊಬ್ಬರ ಮಾರಾಟ ಮಾಡಲು ಅವಕಾಶವಿಲ್ಲ. ತಪ್ಪು ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದೇನೆ. ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ, ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.
ಗೊಬ್ಬರ ಹಂಚಿಕೆ ವಿಚಾರದಲ್ಲಿ ಸೊಸೈಟಿ ಸೆಕ್ರೆಟರಿ ಹಾಗೂ ಡೈರೆಕ್ಟರ್‌ಗಳೇ ಜವಾಬ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಜವಾಬ್ದಾರರಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಸೊಸೈಟಿಗೆ ಬರಬೇಕಿದ್ದ ಗೊಬ್ಬರ ದಾರಿ ಮಧ್ಯೆಯೇ ಮಾರಾಟವಾಗಿದೆಯೇ ಎಂಬ ರೈತರ ಆರೋಪಕ್ಕೆ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ.
ಇದನ್ನೂ ಓದಿ : ಕಡಬ ತಾಲೂಕಿನಲ್ಲಿ ನೈತಿಕ ಪೊಲೀಸ್ಗಿರಿ : 9 ಜನರ ವಿರುದ್ಧ FIR



















