ಬೆಂಗಳೂರು : ರಾಜ್ಯದಲ್ಲಿ RSS ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿರುವ ಬೆನ್ನಲ್ಲೇ, ಸಾರ್ವಜನಿಕ ಆಸ್ತಿಗಳು ಮತ್ತು ಸರ್ಕಾರಿ ಆವರಣಗಳ ಬಳಕೆಗೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಗೃಹ ಇಲಾಖೆಯಡಿ ‘ಕರ್ನಾಟಕ ಸರ್ಕಾರದ ಆವರಣಗಳು ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆಯ ನಿಯಂತ್ರಣ ವಿಧೇಯಕ-2026’ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ವಿಧೇಯಕದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ಆವರಣಗಳು ಮತ್ತು ಸಾರ್ವಜನಿಕ ಆಸ್ತಿಗಳನ್ನು ಯಾವುದೇ ನಿರ್ದಿಷ್ಟ ಸಂಘಟನೆ ಅಥವಾ ಸಂಸ್ಥೆ ತನ್ನ ಚಟುವಟಿಕೆಗಳಿಗೆ ಬಳಸುವುದನ್ನು ನಿಯಂತ್ರಿಸುವ ಉದ್ದೇಶವನ್ನು ವಿಧೇಯಕ ಹೊಂದಿರಲಿದೆ ಎಂದು ಚರ್ಚೆಯಾಗಿದೆ.
ಆದರೆ, ಈ ವಿಧೇಯಕದಲ್ಲಿ ಆರ್‌ಎಸ್‌ಎಸ್ ಹೆಸರನ್ನು ನೇರವಾಗಿ ಉಲ್ಲೇಖಿಸಬಾರದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧೇಯಕವು ಯಾವುದೇ ಒಂದು ಸಂಘಟನೆಗೆ ಮಾತ್ರ ಅನ್ವಯಿಸುವ ರೀತಿಯಲ್ಲಿ ಕಾಣಿಸಿಕೊಳ್ಳಬಾರದು. ಬದಲಾಗಿ ರಾಜ್ಯದಲ್ಲಿರುವ ಎಲ್ಲ ಸಂಘಟನೆಗಳು ಮತ್ತು ಸಂಸ್ಥೆಗಳಿಗೆ ಸಮಾನವಾಗಿ ಅನ್ವಯವಾಗುವಂತೆ ನಿಯಮಗಳನ್ನು ರೂಪಿಸಬೇಕು ಎಂಬುದು ಸಿಎಂ ಸೂಚನೆ ಎನ್ನಲಾಗಿದೆ.
ವಿಧೇಯಕದ ಬಗ್ಗೆ ಮಾತನಾಡುವಾಗಲೂ ಆರ್‌ಎಸ್‌ಎಸ್ ಹೆಸರನ್ನು ಪ್ರಸ್ತಾಪಿಸದಂತೆ ಸಚಿವರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಆರ್‌ಎಸ್‌ಎಸ್ ಹೆಸರು ಉಲ್ಲೇಖಿಸಿದರೆ ಪ್ರತಿಪಕ್ಷ ಬಿಜೆಪಿಗೆ ಅದನ್ನೇ ಪ್ರಮುಖ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಅವಕಾಶ ಸಿಗಬಹುದು ಎಂಬ ಕಾರಣಕ್ಕೆ, ವಿಧೇಯಕದ ಉದ್ದೇಶ ಮತ್ತು ವ್ಯಾಪ್ತಿ ಎಲ್ಲರಿಗೂ ಅನ್ವಯವಾಗುವಂತಿರಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಆರ್‌ಎಸ್‌ಎಸ್ ವಿರುದ್ಧದ ನಿರ್ದಿಷ್ಟ ಕ್ರಮ ಎಂಬ ಭಾವನೆ ಮೂಡದಂತೆ, ಸಾರ್ವಜನಿಕ ಆಸ್ತಿ ಮತ್ತು ಸರ್ಕಾರಿ ಆವರಣಗಳ ಬಳಕೆಗೆ ಸಂಬಂಧಿಸಿದ ಸಾಮಾನ್ಯ ನಿಯಂತ್ರಣದ ವಿಧೇಯಕವಾಗಿ ಇದನ್ನು ಮಂಡಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಸರ್ಕಾರದ ಆಸ್ತಿಗಳನ್ನು ಯಾರೇ ಬಳಸಿದರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ ಎಂಬ ಸಂದೇಶ ನೀಡಲು ಸರ್ಕಾರ ಮುಂದಾಗಿದೆ.
ಒಟ್ಟಿನಲ್ಲಿ, ‘ಕರ್ನಾಟಕ ಸರ್ಕಾರದ ಆವರಣಗಳು ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆಯ ನಿಯಂತ್ರಣ ವಿಧೇಯಕ-2026’ ಮೂಲಕ ಸಾರ್ವಜನಿಕ ಆಸ್ತಿ ಬಳಕೆಗೆ ಹೊಸ ನಿಯಮಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಧೇಯಕದ ಮುಂದಿನ ರೂಪುರೇಷೆ ಹಾಗೂ ವಿಧಾನಮಂಡಲದಲ್ಲಿ ಅದರ ಮಂಡನೆ ಬಳಿಕ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮತ್ತಷ್ಟು ವಾಗ್ವಾದ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಸಭಾಪತಿ ಸ್ಥಾನಕ್ಕೆ ಇಂದು ಮೆಗಾ ಹೈವೋಲ್ಟೇಜ್ ಎಲೆಕ್ಷನ್ ; ಕಾಂಗ್ರೆಸ್-NDA ನಡುವೆ ಫೈಟ್ !



















