ಬೆಂಗಳೂರು : ಹೊಟೇಲ್‌ಗಳು, ಡಾಬಾಗಳಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಪ್ರಾಧಿಕಾರ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಗಳ ಅನ್ವಯ ಹೊರಡಿಸಿರುವ ಈ ಮಾರ್ಗಸೂಚಿಯಲ್ಲಿ ಹೊಟೇಲ್ ಮಾಲೀಕರು ಮತ್ತು ಆಹಾರ ವಹಿವಾಟುದಾರರು ಕಡ್ಡಾಯವಾಗಿ ಪಾಲಿಸಬೇಕಾದ ಹಲವು ನಿಯಮಗಳನ್ನು ಸೂಚಿಸಲಾಗಿದೆ.
ಹೊಟೇಲ್‌ನ ಆಹಾರ ವ್ಯವಹಾರದ ಪರವಾನಗಿಯನ್ನು ಗ್ರಾಹಕರಿಗೆ ಕಾಣುವಂತೆ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು. ವ್ಯವಹಾರದ ಪ್ರಕ್ರಿಯೆ ಅಥವಾ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿದರೂ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಅಡುಗೆಮನೆ ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತಿರಬೇಕು. ಕಚ್ಚಾ ಆಹಾರ ತೊಳೆಯಲು, ಪಾತ್ರೆ ಹಾಗೂ ಉಪಕರಣಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್‌ಗಳನ್ನು ಬಳಸಬೇಕು.
ಅಡುಗೆ ಮತ್ತು ಆಹಾರ ವಿತರಣೆಯ ಪಾತ್ರೆಗಳನ್ನು ಡಿಟರ್ಜೆಂಟ್ ಹಾಗೂ ಬಿಸಿ ನೀರಿನಿಂದ ಸ್ವಚ್ಛಗೊಳಿಸಬೇಕು. ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಹಣ್ಣು, ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು. ಆಹಾರವನ್ನು ಸಮರ್ಪಕವಾಗಿ ತಯಾರಿಸಿ ಸಂಪೂರ್ಣವಾಗಿ ಬೇಯಿಸಬೇಕು. ಅಗತ್ಯವಿರುವ ಆಹಾರ ಉತ್ಪನ್ನಗಳ ರಾಸಾಯನಿಕ ಮತ್ತು ಸೂಕ್ಷ್ಮಜೀವಿ ಮಾಲಿನ್ಯ ಪರೀಕ್ಷೆಯನ್ನೂ ಖಚಿತಪಡಿಸಬೇಕು.
ವೆಜ್-ನಾನ್‌ವೆಜ್‌ಗೆ ಪ್ರತ್ಯೇಕ ವ್ಯವಸ್ಥೆ
ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಎರಡಕ್ಕೂ ಪ್ರತ್ಯೇಕ ಕತ್ತರಿಸುವ ಚಾಕು, ಪಾತ್ರೆ ಹಾಗೂ ಸಂಗ್ರಹಣಾ ವ್ಯವಸ್ಥೆ ಇರಬೇಕು. ಕಚ್ಚಾ ಮಾಂಸ, ಮೀನು, ಸೀಫುಡ್ ಮತ್ತು ತರಕಾರಿಗಳನ್ನು ಪರಸ್ಪರ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಆಹಾರ ಸಂಗ್ರಹಣೆಯಲ್ಲೂ ತಾಪಮಾನ ನಿಯಮ ಪಾಲನೆ ಕಡ್ಡಾಯ. ತಣ್ಣನೆಯ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ, ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಇರಿಸಬೇಕು. ಫ್ರೋಜನ್ ಆಹಾರವನ್ನು ಮೈನಸ್ 18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್:
ಬಳಸಿದ ಅಡುಗೆ ಎಣ್ಣೆಯನ್ನು ಅನಧಿಕೃತವಾಗಿ ಮರುಬಳಕೆ ಮಾಡಬಾರದು. ಅದನ್ನು ನಿಯಮಾನುಸಾರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅವಧಿ ಮೀರಿದ ಆಹಾರ, ಹಾಳಾದ ಹಣ್ಣು-ತರಕಾರಿ ಅಥವಾ ಶಿಲೀಂಧ್ರ ಕಾಣಿಸಿಕೊಂಡ ಆಹಾರವನ್ನು ತಕ್ಷಣ ವಿಲೇವಾರಿ ಮಾಡಬೇಕು. ಅನುಮತಿಯಿಲ್ಲದ ಆಹಾರ ಸೇರ್ಪಡೆಗಳು ಹಾಗೂ ಅಸುರಕ್ಷಿತ ಕೃತಕ ಬಣ್ಣಗಳ ಬಳಕೆಯನ್ನೂ ನಿಷೇಧಿಸಲಾಗಿದೆ.
ಸಿಬ್ಬಂದಿಗೂ ಕಠಿಣ ನಿಯಮ
ಆಹಾರ ನಿರ್ವಹಿಸುವ ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಸಮವಸ್ತ್ರ, ಹೇರ್‌ನೆಟ್ ಅಥವಾ ತಲೆಕವಚ ಹಾಗೂ ಅಗತ್ಯವಿದ್ದಲ್ಲಿ ಮಾಸ್ಕ್ ಮತ್ತು ಏಪ್ರನ್ ಧರಿಸಬೇಕು. ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಡುಗೆ ಮತ್ತು ಆಹಾರ ಸೇವಾ ಸಿಬ್ಬಂದಿಯ ಮಾನ್ಯ ವೈದ್ಯಕೀಯ ಫಿಟ್‌ನೆಸ್ ದಾಖಲೆಗಳನ್ನು ನಿರ್ವಹಿಸಬೇಕು. ಸಿಬ್ಬಂದಿಗೆ ಆಹಾರ ಸುರಕ್ಷತೆ ಮತ್ತು ವೈಯಕ್ತಿಕ ನೈರ್ಮಲ್ಯದ ಕುರಿತು ನಿಯಮಿತ ತರಬೇತಿ ನೀಡಬೇಕು. ಪ್ರತಿನಿತ್ಯದ ಆಹಾರ ಸುರಕ್ಷತೆ ಕ್ರಮಗಳ ಮೇಲ್ವಿಚಾರಣೆಗೆ ತರಬೇತಿ ಪಡೆದ FoSTaC Food Safety Supervisor ಅನ್ನು ನಿಯೋಜಿಸುವಂತೆಯೂ ಸೂಚಿಸಲಾಗಿದೆ.
ಹೊಟೇಲ್‌ನಲ್ಲಿ ಉಚಿತ ನೀರು, ಶೌಚಾಲಯ
ಹೊಟೇಲ್‌ಗಳಲ್ಲಿ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ಒದಗಿಸುವುದು ಕಡ್ಡಾಯ. ಕುಡಿಯುವ ನೀರು ಮಾತ್ರವಲ್ಲದೆ, ಅಡುಗೆ, ಆಹಾರ ತಯಾರಿಕೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೂ ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರನ್ನೇ ಬಳಸಬೇಕು.
ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ದಾಖಲೆಗಳನ್ನು ನಿರ್ವಹಿಸಬೇಕು. ಹೊಟೇಲ್‌ಗೆ ಬರುವ ಸಾರ್ವಜನಿಕರಿಗೆ ಶೌಚಾಲಯದ ಉಚಿತ ಬಳಕೆಗೆ ಅವಕಾಶ ನೀಡಬೇಕು. ಹೊಟೇಲ್ ಕಾರ್ಯನಿರ್ವಹಿಸುವ ಅವಧಿಯಲ್ಲೆಲ್ಲ ಶೌಚಾಲಯ ಸ್ವಚ್ಛವಾಗಿರಬೇಕು. ಸಾಬೂನು, ಶುದ್ಧ ಹರಿಯುವ ನೀರು ಹಾಗೂ ಕೈತೊಳೆಯುವ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು.
ನೊಣ, ಜಿರಳೆ, ಇಲಿಗಳಿಗೆ ಎಂಟ್ರಿ ಇಲ್ಲ!
ಆಹಾರ ಸಂಗ್ರಹಣಾ ಪ್ರದೇಶ ಮತ್ತು ಅಡುಗೆಮನೆಯಲ್ಲಿ ಕೀಟ, ನೊಣ, ಜಿರಳೆ, ಇಲಿಗಳು ಹಾಗೂ ಇತರೆ ದಂಶಕಗಳು ಪ್ರವೇಶಿಸದಂತೆ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಪೆಸ್ಟ್ ಕಂಟ್ರೋಲ್ ನಡೆಸಿ ಅದರ ದಾಖಲೆಗಳನ್ನು ನಿರ್ವಹಿಸಬೇಕು. ಕಿಟಕಿ, ಬಾಗಿಲುಗಳಿಗೆ ಅಗತ್ಯವಿರುವಲ್ಲಿ ಜಾಲರಿ ಅಥವಾ ಏರ್‌ಕರ್ಟನ್ ಅಳವಡಿಸಬೇಕು. ಅಡುಗೆಮನೆಯ ಗೋಡೆ, ನೆಲ ಮತ್ತು ಮೇಲ್ಛಾವಣಿಯನ್ನು ಸ್ವಚ್ಛವಾಗಿಡಬೇಕು. ಉದುರುವ ಬಣ್ಣ, ಬಿರುಕುಗಳು, ತೆರೆದ ಅಥವಾ ನೇತಾಡುವ ವಿದ್ಯುತ್ ತಂತಿಗಳಂತಹ ಅಪಾಯಕಾರಿ ಪರಿಸ್ಥಿತಿಗಳು ಇರದಂತೆ ನೋಡಿಕೊಳ್ಳಬೇಕು.
ಕಸಕ್ಕೂ ಇರಬೇಕು ಸರಿಯಾದ ನಿರ್ವಹಣೆ
ಕಸದ ಬುಟ್ಟಿಗಳನ್ನು ನಿಯಮಿತವಾಗಿ ಖಾಲಿ ಮಾಡಿ, ಮುಚ್ಚಳದೊಂದಿಗೆ ಇಡಬೇಕು. ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅಡುಗೆ ಪ್ರದೇಶದಲ್ಲಿ ಆಹಾರ ತ್ಯಾಜ್ಯ ಹಾಗೂ ಇತರೆ ಕಸವನ್ನು ದೀರ್ಘಕಾಲ ಸಂಗ್ರಹಿಸಿಡಬಾರದು.
ಇನ್ನು ಆಹಾರ ಸಾಗಣೆಯ ವಾಹನಗಳು ಸ್ವಚ್ಛ ಹಾಗೂ ನೈರ್ಮಲ್ಯಯುತವಾಗಿರಬೇಕು. ಸಾಧ್ಯವಾದಷ್ಟು ಆಹಾರ ಸಾಗಣೆಗಾಗಿಯೇ ವಾಹನ ಬಳಸಬೇಕು. ಸಾಗಣೆ ವೇಳೆ ಆಹಾರಕ್ಕೆ ಅಗತ್ಯವಿರುವ ತಾಪಮಾನವನ್ನು ಕಾಪಾಡಬೇಕು. ಒಟ್ಟಿನಲ್ಲಿ, ಹೊಟೇಲ್ ಮತ್ತು ಡಾಬಾಗಳಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಸೂಚಿಸಿದೆ.
ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ರಾಮಮಂದಿರದ CEO ಹುದ್ದೆಗೆ ಸಂದರ್ಶನ : ಜನಿವಾರ, ಮದ್ಯಪಾನ, ಮಾಂಸಾಹಾರ… ಪ್ರಶ್ನೆಗಳ ಸುರಿಮಳೆ!



















