ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಆಗಸ್ಟ್ 13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕ್ಷಣಗಣನೆ ಶುರುವಾಗಿದೆ. ಇದೇ ದಿನ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನವೂ ಆರಂಭವಾಗಲಿದ್ದು, ಬಂದ್‌ನ ಬಿಸಿ ಮತ್ತು ರಾಜಕೀಯ ಚರ್ಚೆ ಎರಡೂ ಒಟ್ಟಿಗೆ ಕಾವೇರಲಿವೆ.
ಆದರೆ ಬಂದ್‌ಗೆ ಇನ್ನೇನು ಒಂದೇ ದಿನ ಬಾಕಿ ಇರುವಾಗಲೇ ಕನ್ನಡಪರ ಸಂಘಟನೆಗಳ ನಡುವೆ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಕೆಲ ಸಂಘಟನೆ ನೇರ ಬೆಂಬಲ ಘೋಷಿಸಿದ್ದರೆ, ಇನ್ನೂ ಕೆಲವರು ನೈತಿಕ ಬೆಂಬಲಕ್ಕೆ ಸೀಮಿತವಾಗಿದ್ದಾರೆ. ಮತ್ತೊಂದೆಡೆ ಪ್ರಮುಖ ಸಂಘಟನೆಗಳು ಬಂದ್‌ಗೆ ವಿರೋಧ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಬಂದ್‌ಗೆ ನೈತಿಕ ಬೆಂಬಲ ಮಾತ್ರ
ಹೋಟೆಲ್ ಮಾಲೀಕರ ಸಂಘ, ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಹೇಳಿವೆ. ಆದರೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಿರುವುದು, ಸುಪ್ರೀಂ ಕೋರ್ಟ್ ಆದೇಶ ಹಾಗೂ ರಾಜ್ಯ ಸರ್ಕಾರದ ಬಂದ್ ಬೇಡ ಎಂಬ ಮನವಿಯ ಹಿನ್ನೆಲೆಯಲ್ಲಿ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘಟನೆಗಳೂ ಇದೇ ನಿಲುವು ತಳೆದಿವೆ. ಹೀಗಾಗಿ ಸಾರಿಗೆ, ಶಾಲೆ, ಹೋಟೆಲ್ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಇನ್ನು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದೆ. “ಈ ಹಂತದಲ್ಲಿ ಬಂದ್ ನಡೆಸುವುದು ಬೇಡ. ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಬಂದ್ ನಿರ್ಧಾರದಿಂದ ಹಿಂದೆ ಸರಿಯುವಂತೆ ವಾಟಾಳ್ ನಾಗರಾಜ್ ಅವರನ್ನು ಮನವೊಲಿಸುತ್ತೇವೆ” ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಇನ್ನೊಂದೆಡೆ, ವಾಟಾಳ್ ನಾಗರಾಜ್ ಮಾತ್ರ ಯಾವುದೇ ಕಾರಣಕ್ಕೂ ಬಂದ್‌ನಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವು ತಳೆದಿದ್ದಾರೆ. ರೈತರ ಹಿತಾಸಕ್ತಿಗಾಗಿ ಬಂದ್ ನಡೆಸಿಯೇ ತೀರುತ್ತೇವೆ ಎಂದು ಹೇಳಿದ್ದು, ನಗರದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬಂದ್‌ಗೆ ಬೆಂಬಲ ಯಾರದ್ದು?
ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ.
ರಾಜ್‌ಕುಮಾರ್ ಅಭಿಮಾನಿ ಸಂಘ.
ಕನ್ನಡ ಸೇನೆ
ಕನ್ನಡ ಜಾಗೃತಿ ವೇದಿಕೆ.
ಬಂದ್‌ಗೆ ನೇರ ಬೆಂಬಲ ಇಲ್ಲದವರು :
ಕರವೇ ಪ್ರವೀಣ್ ಶೆಟ್ಟಿ ಬಣ
ಕರವೇ ಶಿವರಾಮೇಗೌಡ ಬಣ
ಕರವೇ ನಾರಾಯಣ ಗೌಡ ಬಣ
ರಾಜ್ಯ ರೈತ ಸಂಘಟನೆಗಳ ಒಕ್ಕೂಟ
ಖಾಸಗಿ ಸಾರಿಗೆ ಒಕ್ಕೂಟ
KSRTC, BMTC, ಮೆಟ್ರೋ
ಬಹುತೇಕ ಆಟೋ ಸಂಘಟನೆಗಳು
ಖಾಸಗಿ ಶಾಲೆಗಳ ಒಕ್ಕೂಟಗಳಾದ RUPSA, CAMS
ಹೋಟೆಲ್ ಅಸೋಸಿಯೇಷನ್
ಟ್ರಾವೆಲ್ಸ್ ಅಸೋಸಿಯೇಷನ್.
ಒಟ್ಟಿನಲ್ಲಿ, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದರೂ, ಪ್ರಮುಖ ಸಂಘಟನೆಗಳ ನಡುವೆ ಒಮ್ಮತ ಮೂಡದಿರುವುದು ಬಂದ್‌ನ ಪರಿಣಾಮದ ಬಗ್ಗೆ ಭಾರೀ ಗೊಂದಲ ಸೃಷ್ಟಿಸಿದೆ. ಬಹುತೇಕ ಸೇವೆಗಳು ಎಂದಿನಂತೆ ಮುಂದುವರಿದರೆ ಬಂದ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಾವೇರಿ ನೀರಿಗಾಗಿ ಆರಂಭವಾಗಿರುವ ಹೋರಾಟದ ಹಾದಿ ಯಾವ ದಿಕ್ಕು ಹಿಡಿಯಲಿದೆ? ಕರ್ನಾಟಕ ನಿಜಕ್ಕೂ ಬಂದ್ ಆಗುತ್ತಾ, ಅಥವಾ ಬಂದ್ ಕೇವಲ ಸಾಂಕೇತಿಕವಾಗಿಯೇ ಉಳಿಯುತ್ತಾ? ಇದಕ್ಕೆ ಆಗಸ್ಟ್ 13ರ ಬೆಳಗ್ಗೆಯೇ ಉತ್ತರ ಸಿಗಲಿದೆ.
ಇದನ್ನೂ ಓದಿ : ನೋಯ್ಡಾ ವಿಮಾನ ನಿಲ್ದಾಣ ಜಲಾವೃತ : “ಇಲ್ಲಿ ದೋಣಿಗಳು ಚಲಿಸುತ್ತಿವೆಯೇ?” ಎಂದು ಸರ್ಕಾರಕ್ಕೆ ಅಖಿಲೇಶ್ ಯಾದವ್ ಟಾಂಗ್!



















