ಬೆಂಗಳೂರು : ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ರಾಜ್ಯ ಮಹಿಳಾ ಆಯೋಗದ ಜಂಟಿ ಸಹಯೋಗದಲ್ಲಿ ‘ತೇರೆ ಮೇರೆ ಸಪ್ನೆ–ಕೂಡಿ ಬಾಳೋಣ’ ಎಂಬ ವಿವಾಹಪೂರ್ವ ಸಂವಹನ ಯೋಜನೆಯನ್ನು ಜಾರಿಗೆ ತರಲಾಗಿದೆ.
ಮದುವೆಗೂ ಮುನ್ನವೇ ದಾಂಪತ್ಯ ಜೀವನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮದುವೆ ಎನ್ನುವುದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಜೀವನಪೂರ್ತಿ ಸಾಗುವ ಸಂಬಂಧವಾಗಿರುವುದರಿಂದ ಮದುವೆಗೂ ಮುನ್ನವೇ ಪರಸ್ಪರರ ನಿರೀಕ್ಷೆಗಳು, ಭಾವನೆಗಳು, ಜವಾಬ್ದಾರಿಗಳು ಹಾಗೂ ಭವಿಷ್ಯದ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿಕೊಳ್ಳಬೇಕು ಎಂಬುದು ಯೋಜನೆಯ ಉದ್ದೇಶ.
ಈ ಯೋಜನೆಯಡಿ ಪ್ರೀ-ಮ್ಯಾರಿಟಲ್ ಕಮ್ಯುನಿಕೇಷನ್ ಸೆಂಟರ್ (PMCC) ಮೂಲಕ ಮದುವೆಯಾಗಲು ಸಿದ್ಧರಾಗಿರುವ ಜೋಡಿಗಳು ಹಾಗೂ ವಿವಾಹದ ಬಗ್ಗೆ ಮಾರ್ಗದರ್ಶನ ಪಡೆಯಲು ಬಯಸುವವರಿಗೆ ಮಾಹಿತಿ ಮತ್ತು ಸಮಾಲೋಚನೆ ನೀಡಲಾಗುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ, ನಂಬಿಕೆ, ಉತ್ತಮ ಸಂವಹನ ಹಾಗೂ ಹೊಂದಾಣಿಕೆ ಬೆಳೆಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.
ಆರೋಗ್ಯಕರ ದಾಂಪತ್ಯ ಜೀವನಕ್ಕೆ ‘ನಾನು’ ಎನ್ನುವುದಕ್ಕಿಂತ ‘ನಾವು’ ಎನ್ನುವ ಮನೋಭಾವ ಮುಖ್ಯ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ. ಸಂಗಾತಿಯ ಅಭಿಪ್ರಾಯ ಮತ್ತು ಭಾವನೆಗಳನ್ನು ಗೌರವಿಸುವುದು, ವೈಯಕ್ತಿಕ ವಿಚಾರಗಳಿಗೆ ಗೌರವ ನೀಡುವುದು, ಹಣಕಾಸಿನ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದು ಹಾಗೂ ಭವಿಷ್ಯದ ಗುರಿಗಳನ್ನು ಒಟ್ಟಾಗಿ ರೂಪಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಇದರ ಜೊತೆಗೆ ಸಂಬಂಧದಲ್ಲಿ ಕಂಡುಬರುವ ಎಚ್ಚರಿಕೆಯ ಸೂಚನೆಗಳನ್ನು ಗುರುತಿಸುವುದು, ಪರಸ್ಪರರ ಆರೋಗ್ಯ ಮತ್ತು ಕನಸುಗಳಿಗೆ ಬೆಂಬಲ ನೀಡುವುದು, ಕುಟುಂಬದ ಪ್ರಮುಖ ನಿರ್ಧಾರಗಳಲ್ಲಿ ಇಬ್ಬರೂ ಭಾಗವಹಿಸುವುದು ಹಾಗೂ ಸಮಸ್ಯೆಗಳು ಎದುರಾದಾಗ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ತಿಳಿಸಲಾಗುತ್ತದೆ. ಇನ್ನು, ಸಂವಹನ, ಭಾವನಾತ್ಮಕ ಅರಿವು, ಹಣಕಾಸಿನ ಯೋಜನೆ, ಆರೋಗ್ಯ, ಕಾನೂನು ಹಕ್ಕುಗಳು, ಲಿಂಗ ಸಮಾನತೆ ಮತ್ತು ಕುಟುಂಬ ಸಂಬಂಧಗಳಂತಹ ವಿಷಯಗಳೂ ಒಳಗೊಂಡಿರುತ್ತದೆ.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ‘Tere Mere Sapne – Pre-Marital Communication Centre’ ಎಂಬ ವೆಬ್‌ಸೈಟ್ ಕೂಡ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಕಾರ್ಯಕ್ರಮದ ಉದ್ದೇಶ, ತರಬೇತಿ ಮಾದರಿ, ಮಾರ್ಗದರ್ಶನ ಹಾಗೂ ವಿವಿಧ ಮಾಹಿತಿಗಳನ್ನು ನೀಡಲಾಗಿದೆ. ಮದುವೆಗೂ ಮುನ್ನದ ಸಿದ್ಧತೆ, ಪರಸ್ಪರ ಸಂವಹನ, ಭವಿಷ್ಯದ ಯೋಜನೆ, ಕುಟುಂಬ ಸಂಬಂಧಗಳು ಮತ್ತು ಮದುವೆಗೆ ಸಂಬಂಧಿಸಿದ ಕಾನೂನು ವಿಚಾರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಮದುವೆಗೂ ಮುನ್ನ ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು, ನಿರೀಕ್ಷೆಗಳನ್ನು ಹಂಚಿಕೊಳ್ಳುವುದು, ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸುವುದು ಹಾಗೂ ಗೌರವ ಮತ್ತು ನಂಬಿಕೆಯೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದು ಈ ಕಾರ್ಯಕ್ರಮದ ಪ್ರಮುಖ ಸಂದೇಶವಾಗಿದೆ. ಉತ್ತಮ ದಾಂಪತ್ಯ ಜೀವನಕ್ಕೆ ಅಗತ್ಯವಾದ ಸಂವಹನ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯನ್ನು ಬೆಳೆಸುವ ಮೂಲಕ ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚಿಸುವ ಗುರಿಯನ್ನು ‘ತೇರೆ ಮೇರೆ ಸಪ್ನೆ–ಕೂಡಿ ಬಾಳೋಣ’ ಯೋಜನೆ ಹೊಂದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಚಿವ ಸ್ಥಾನ ಸಿಗದೆ ಅಸಮಾಧಾನ ; ಮಹದೇವಪ್ಪ ನಿವಾಸದಲ್ಲಿ ಆಕಾಂಕ್ಷಿಗಳ ರಹಸ್ಯ ಸಭೆ!



















