ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್‌ನಿಂದ ಬಂಡಾಯವೆದ್ದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರಿದ್ದ ಸಂಸದರ ನಡುವೆಯೇ ಈಗ ಭಿನ್ನಮತ ಭುಗಿಲೆದ್ದಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ನಿಕಟ ಬಾಂಧವ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮೂವರು ಸಂಸದರು, ಮೈತ್ರಿಕೂಟದ ಸಭೆಗಳಿಗೆ ಗೈರುಹಾಜರಾಗುವ ಮೂಲಕ ಬಂಡಾಯ ಸಾರಿದ್ದಾರೆ.
ತ್ರಿಪುರಾ ಮೂಲದ ಎನ್‌ಸಿಪಿಐ ಪಕ್ಷಕ್ಕೆ ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ತೊರೆದ 20 ಮಂದಿ ಸಂಸದರು ಸೇರ್ಪಡೆಯಾಗಿದ್ದರು. ಆದರೆ, ಈ ಪೈಕಿ ಸಂಸದರಾದ ಅಬು ತಾಹೇರ್ ಖಾನ್, ಖಲೀಲೂರ್ ರೆಹಮಾನ್ ಮತ್ತು ಯೂಸುಫ್ ಪಠಾಣ್ ಅವರು ಬಿಜೆಪಿ ಜೊತೆಗಿನ ನಿಕಟ ಮೈತ್ರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್ ಕೈತಪ್ಪಬಹುದು ಎಂಬ ಭೀತಿಯಿಂದ ಈ ಮೂವರು ನಾಯಕರು ಎನ್‌ಡಿಎ ಮೈತ್ರಿಕೂಟದ ಸಭೆಗಳಿಂದ ದೂರ ಉಳಿಯುತ್ತಿದ್ದಾರೆ. “ನಾವು ಬಿಜೆಪಿ ಜೊತೆ ಹೋಗುವುದಿಲ್ಲ ಮತ್ತು ಎನ್‌ಡಿಎ ಭಾಗವಾಗುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ” ಎಂದು ಸಂಸದ ಅಬು ತಾಹೇರ್ ಖಾನ್ ತಿಳಿಸಿದ್ದಾರೆ.
ಸಂಸದರ ನಡೆಗೆ ಮಮತಾ ಬ್ಯಾನರ್ಜಿ ಬಣ ಆಕ್ರೋಶ
ಇನ್ನೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಣವು ಈ ಬಂಡಾಯ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ಮಾತನಾಡಿ, “ಈ ನಾಯಕರು ಜನರನ್ನು ಹಾದಿತಪ್ಪಿಸುತ್ತಿದ್ದಾರೆ. ತಾವು ಎನ್‌ಸಿಪಿಐ ಜೊತೆಗಿರುವುದಾಗಿ ಈಗಾಗಲೇ ಸ್ಪೀಕರ್‌ಗೆ ಪತ್ರ ನೀಡಿದ್ದಾರೆ.
ಮುಸ್ಲಿಂ ಮತದಾರರು ಶೇ.60ರಿಂದ 65ರಷ್ಟಿರುವ ಮುರ್ಷಿದಾಬಾದ್‌ನಂತಹ ಕ್ಷೇತ್ರಗಳಲ್ಲಿ ಬಿಜೆಪಿ ಸಖ್ಯ ಬೆಳೆಸಿ ಜನರಿಗೆ ನಂಬಿಕೆದ್ರೋಹ ಮಾಡಿದ್ದಾರೆ. ಈಗ ತಮ್ಮ ಕ್ಷೇತ್ರಗಳಲ್ಲಿ ಜನರನ್ನು ಎದುರಿಸಲಾಗದೆ ನಾಟಕವಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬ ನಾಯಕ ಕುನಾಲ್ ಘೋಷ್ ಅವರು, “ಇದು ಬಿಜೆಪಿಯ ಬಿ-ಟೀಮ್. ಮಮತಾ ಬ್ಯಾನರ್ಜಿ ಹೆಸರಿನಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಪಡೆದು ಗೆದ್ದ ಇವರು, ಈಗ ತಮ್ಮ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಭಿನ್ನಮತ ತಳ್ಳಿಹಾಕಿದ ಎನ್‌ಸಿಪಿಐ ನಾಯಕತ್ವ
ಆದಾಗ್ಯೂ, ಎನ್‌ಸಿಪಿಐ ಬಣದ ನಾಯಕತ್ವ ವಹಿಸಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದ್ದಾರೆ. “ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೀರ್ಘ ಚರ್ಚೆ ನಡೆಸಿದ್ದು, ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅನೇಕ ಸಲಹೆಗಳನ್ನು ಪಡೆದುಕೊಂಡಿದ್ದೇವೆ. ಆ ಸಭೆಯಲ್ಲಿ ಅಬು ತಾಹೇರ್ ಕೂಡ ಉಪಸ್ಥಿತರಿದ್ದರು” ಎಂದು ಸ್ಪಷ್ಟಪಡಿಸಿದ್ದಾರೆ.
ಮೂವರೂ ಸಂಸದರು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರಲ್ಲದೆ, ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಡೆದ ಉಪಹಾರ ಕೂಟದಲ್ಲೂ ಪಾಲ್ಗೊಂಡಿದ್ದರು. ಆದರೆ, ಕೇವಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸುತ್ತೇವೆಯೇ ಹೊರತು ಬಿಜೆಪಿಯ ರಾಜಕೀಯ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂದು ಈ ಮೂವರು ಸಂಸದರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : ನುಸುಳುಕೋರನ ಬಿಡುಗಡೆಗಾಗಿ ಪ.ಬಂಗಾಳದ ರೈತನನ್ನು ಅಪಹರಿಸಿ ಬಾಂಗ್ಲಾಗೆ ಒಯ್ದ ದುಷ್ಕರ್ಮಿಗಳು



















