ಡೆಹ್ರಾಡೂನ್: ವರ್ಷಗಳ ಕಾಲ ತೋರಿದ ತಾಳ್ಮೆ ಮತ್ತು ಸತತ ಕಾಳಜಿಯಿಂದಾಗಿ ಉತ್ತರಾಖಂಡದ ರೇಣು ಧರಿಯಾಲ್ ಎಂಬ ಮಹಿಳೆ ಜಗತ್ತಿನ ಗಮನ ಸೆಳೆದಿದ್ದು, ಜೀವಂತ ಮಹಿಳೆಯರಲ್ಲಿ ಅತ್ಯಂತ ಉದ್ದವಾದ ಕೇಶ ಹೊಂದಿದ ಗಿನ್ನೆಸ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೇಣು ಅವರ ಕೂದಲು ಬರೋಬ್ಬರಿ 271.50 ಸೆಂಟಿಮೀಟರ್ (8 ಅಡಿ 10 ಇಂಚು) ಉದ್ದವಿದ್ದು, ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಎನಿಸಿಕೊಂಡಿದ್ದ ರಾಬರ್ಟ್ ವಾಡ್ಲೋ (272 ಸೆಂ.ಮೀ) ಅವರ ಎತ್ತರಕ್ಕೆ ಸರಿಸಮನಾಗಿದೆ. ಏಪ್ರಿಲ್‌ನಲ್ಲಿ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆಯ ತಂಡವು ಅಧಿಕೃತವಾಗಿ ಅಳತೆ ಮಾಡಿ ಈ ಹೊಸ ಮೈಲಿಗಲ್ಲನ್ನು ದೃಢೀಕರಿಸಿದೆ.
ಉಕ್ರೇನ್ ದಾಖಲೆ ಧೂಳೀಪಟ
ಈ ಹಿಂದೆ ಉಕ್ರೇನ್‌ನ ಅಲೀಯಾ ನಾಸಿರೋವಾ ಎಂಬವರು 257.33 ಸೆಂಟಿಮೀಟರ್ (8 ಅಡಿ 5.3 ಇಂಚು) ಉದ್ದದ ಕೂದಲು ಹೊಂದುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದರು. ಆದರೆ ಈಗ ರೇಣು ಧರಿಯಾಲ್ ಅವರು ನಾಸಿರೋವಾ ಅವರ ದಾಖಲೆಗಿಂತ 14 ಸೆಂಟಿಮೀಟರ್‌ಗೂ ಹೆಚ್ಚು ಉದ್ದ ಬೆಳೆಸುವ ಮೂಲಕ ಆ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 2015 ರಿಂದ ಸತತವಾಗಿ ಕೂದಲನ್ನು ಕತ್ತರಿಸದೆ ಪೋಷಿಸಿಕೊಂಡು ಬಂದಿರುವ ರೇಣು, ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಸೌಂದರ್ಯದ ಕಲ್ಪನೆಯಿಂದ ಪ್ರೇರಿತರಾಗಿ ಈ ಸಾಹಸಕ್ಕೆ ಕೈಹಾಕಿರುವುದಾಗಿ ತಿಳಿಸಿದ್ದಾರೆ.
ಯೂಟ್ಯೂಬರ್ ಆಗಿಯೂ ಪ್ರಸಿದ್ಧಿ
ಇಷ್ಟು ಉದ್ದದ ಕೂದಲನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಕೆಮಿಕಲ್ ಉತ್ಪನ್ನಗಳಿಗಿಂತ ನೈಸರ್ಗಿಕ ವಿಧಾನಗಳಿಗೆ ಆದ್ಯತೆ ನೀಡಿರುವ ರೇಣು, ಸ್ವತಃ ಮನೆಯಲ್ಲೇ ತಯಾರಿಸಿದ ಎಣ್ಣೆ ಮತ್ತು ಶಾಂಪೂಗಳನ್ನು ಬಳಸುತ್ತಾರೆ. ಕೇಶರಾಶಿಯನ್ನು ತೊಳೆಯಲು, ಜಟೆಯನ್ನು ಬಿಡಿಸಲು ಗಂಟೆಗಟ್ಟಲೆ ತಾಳ್ಮೆಯಿಂದ ಶ್ರಮಿಸುತ್ತಾರೆ. ಪ್ರಸ್ತುತ ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿ ಸಕ್ರಿಯರಾಗಿರುವ ಇವರು, ಸಾಮಾಜಿಕ ಜಾಲತಾಣಗಳಲ್ಲಿ ಇತರ ಮಹಿಳೆಯರಿಗೆ ಕೇಶ ವಿನ್ಯಾಸ ಹಾಗೂ ನೈಸರ್ಗಿಕ ಆರೈಕೆಯ ಕುರಿತು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.
ಭಾರತದ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿ
ರಸ್ತೆಯಲ್ಲಿ ಸಾಗುವಾಗ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಸುಂದರ, ದಟ್ಟವಾದ ಉದ್ದನೆಯ ಜಡೆಯನ್ನು ಕಂಡು ಜನರು ಆಶ್ಚರ್ಯಚಕಿತರಾಗುತ್ತಾರೆ. ಈ ಸಾಧನೆಯು ಕೇವಲ ಒಂದು ಶಾರೀರಿಕ ದಾಖಲೆಯಷ್ಟೇ ಅಲ್ಲ, ಇದು ಭಾರತೀಯ ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಸಿಕ್ಕ ಗೌರವ ಎಂದು ರೇಣು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಈ ಶ್ರಮವು ತಮ್ಮ ರಾಜ್ಯ ಹಾಗೂ ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ನೆರವಾಗಿದೆ ಎಂಬ ಸಂತಸ ಅವರಲ್ಲಿದೆ.


















