ನಾಗ್ಪುರ : ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ನಾಗ್ಪುರದ 19 ವರ್ಷದ ಯುವಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿ ತನಿಖೆಗೆ ಸಹಕರಿಸದೆ ಐಷಾರಾಮಿ ಸೌಲಭ್ಯಗಳಿಗೆ ಬೇಡಿಕೆಯಿಡುತ್ತಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಲಾಕ್-ಅಪ್ನ ಗೋಡೆಗಳು ಮಸುಕಾಗಿವೆ, ಶೌಚಾಲಯ ದುರ್ವಾಸನೆ ಬೀರುತ್ತಿದೆ ಎಂದು ದೂರಿರುವ ಆರೋಪಿ, ತನಗೆ ಉಪಾಹಾರಕ್ಕೆ ಪಿಜ್ಜಾ, ರಾತ್ರಿಗೆ ಐಷಾರಾಮಿ ಊಟ, ಮಲಗಲು ಉತ್ತಮ ಹಾಸಿಗೆ ಮತ್ತು ಸೊಳ್ಳೆ ನಿವಾರಕಗಳನ್ನು ಒದಗಿಸುವಂತೆ ಪಟ್ಟು ಹಿಡಿದು ತನಿಖಾಧಿಕಾರಿಗಳನ್ನೇ ಹೈರಾಣಾಗಿಸಿದ್ದಾನೆ.
ಅಪ್ರಾಪ್ತ ಬಾಲಕಿಯ ಅಪಹರಿಸಿ, ಹಿಂಸೆ
ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ 16 ವರ್ಷದ ಪುತ್ರಿ ಆಗಸ್ಟ್ 2 ರಂದು ನಾಪತ್ತೆಯಾಗಿದ್ದಳು. ಹುಡ್ಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ತಾಂತ್ರಿಕ ಕಣ್ಗಾವಲಿನ ಮೂಲಕ ಸೋಮವಾರ ರಾತ್ರಿ ನಾಗ್ಪುರದ ಬಾಡಿಗೆ ಮನೆಯೊಂದರ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ರಕ್ಷಣೆಯ ವೇಳೆ ಬಾಲಕಿಯ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಆರೋಪಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಖಾರೆ ಎಂಬಾತ ಕೈಯಲ್ಲಿ ಬೆಲ್ಟ್ ಹಿಡಿದು ನಿಂತಿದ್ದು, ಹಾಸಿಗೆಯ ಬಳಿ ಚಾಕು ಪತ್ತೆಯಾಗಿತ್ತು. ಬಾಲಕಿಯ ದೇಹದ ಮೇಲೆ ತೀವ್ರ ಗಾಯಗಳ ಗುರುತುಗಳಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಪಖಾರೆ ಕಳೆದ ವರ್ಷ ‘ಆಕಾಶ್ ಮೆಹ್ರಾ’ ಎಂಬ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು, ಅವುಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ನಂತರ ಆಕೆಗೆ ಮಾದಕ ದ್ರವ್ಯ ಬೆರೆಸಿದ ಚಾಕೊಲೇಟ್ಗಳನ್ನು ನೀಡಿ ಅತ್ಯಾಚಾರ ಎಸಗುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ ಆರೋಪಿಯ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ಅಪಹರಣ, ಅತ್ಯಾಚಾರ, ಕೊಲೆ ಯತ್ನ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಬಂಧನದ ನಂತರ ಆರೋಪಿಯು ವೈದ್ಯಕೀಯ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾನಲ್ಲದೆ, ಮೊಬೈಲ್ ಪಾಸ್ವರ್ಡ್ಗಳನ್ನು ನೀಡದೆ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹಣೆಗೆ ತೀವ್ರ ಅಡ್ಡಿಪಡಿಸುತ್ತಿದ್ದಾನೆ.
ಇದನ್ನೂ ಓದಿ : ಟೀಮ್ ಇಂಡಿಯಾದ ಫಿಟ್ನೆಸ್ ನಿಯಮಗಳಲ್ಲಿ ಭಾರಿ ಬದಲಾವಣೆ : ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕಿದ BCCI


















