ಜೈಪುರ : ಮೋಜು ಮಸ್ತಿ ಹಾಗೂ ಐಷಾರಾಮಿ ಜೀವನಕ್ಕಾಗಿ ತನ್ನ 65 ವರ್ಷದ ವೃದ್ಧ ಅತ್ತೆಯನ್ನೇ ಹತ್ಯೆಗೈದು ನಗನಾಣ್ಯ ದೋಚಿದ್ದ ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ರಾಜಸ್ಥಾನದ ಜೈಪುರ ಪೊಲೀಸರು ಬಂಧಿಸಿದ್ದಾರೆ. ಜುಲೈ 30ರಂದು ಜೈಪುರದ ಸಾಂಭಾರ್ ನಿವಾಸಿ ಕಮಲಾ ದೇವಿ ಎಂಬ ವೃದ್ಧೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಘಟನಾ ಸ್ಥಳದಲ್ಲಿದ್ದ ಚಿನ್ನಾಭರಣ ಹಾಗೂ ನಗದು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಮೃತರ ಅಳಿಯ ಪ್ರಕಾಶ್ ನಾರಾಯಣ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದರು. ಈ ವೇಳೆ ಮೃತರ ಸೋದರಸೊಸೆ, ಜೈಪುರದ ಕುಚಾಮನ್ ನಿವಾಸಿ ಲಲಿತಾ ಎಂಬಾಕೆಯ ಮೇಲೆ ಅನುಮಾನ ವ್ಯಕ್ತವಾಗಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಲಲಿತಾ ನೀಡಿದ ಮಾಹಿತಿಯ ಮೇರೆಗೆ ಆಕೆಯ 26 ವರ್ಷದ ಪ್ರಿಯಕರ, ಸಿಕಾರ್ ನಿವಾಸಿ ಬಬ್ಲೂ ಮೀನಾನನ್ನು ಪೊಲೀಸರು ಬಂಧಿಸಿದ್ದಾರೆ.
ಮೋಜುಮಸ್ತಿಗೆ ಹತ್ಯೆ ಎಂದು ತಪ್ಪೊಪ್ಪಿಗೆ
ಆರೋಪಿಗಳು ಹತ್ಯೆ ಮಾಡುವ ಮುನ್ನ ಕಮಲಾ ದೇವಿ ಅವರ ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದ್ದ ಆರೋಪಿಗಳು, ರಾತ್ರಿಯ ವೇಳೆ ಮನೆಗೆ ನುಗ್ಗಿ ದುಷ್ಕೃತ್ಯ ಎಸಗಿದ್ದಾರೆ. ಐಷಾರಾಮಿ ಜೀವನಶೈಲಿ ಹಾಗೂ ಮದ್ಯಪಾನದ ಪಾರ್ಟಿಗಳಿಗೆ ಹಣದ ಅಗತ್ಯವಿದ್ದ ಕಾರಣಕ್ಕೆ ಈ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು, ನಗದು ಹಣ, ಎಟಿಎಂ ಕಾರ್ಡ್ ಮತ್ತು ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಎರಡು ಚಿನ್ನದ ಬಳೆಗಳು, ಚಿನ್ನದ ಓಲೆಗಳು, ಬೆಳ್ಳಿಯ ಕಾಲ್ಗೆಜ್ಜೆಗಳು ಹಾಗೂ ನಾಣ್ಯಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಸಚಿನ್ ಮೀರಿಸಬಲ್ಲ ಪ್ರತಿಭೆ ಸೂರ್ಯವಂಶಿ : ರಾಬಿನ್ ಉತ್ತಪ್ಪ


















