ಬೆಂಗಳೂರು : ಹಿಂದಿನ ಬಿಬಿಎಂಪಿಯ ಪೂರ್ವ ವಲಯ ಹಾಗೂ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್, ಕಾಪಿಯರ್ ಹಾಗೂ ಸ್ಟೇಷನರಿ ಸಾಮಗ್ರಿಗಳ ಪೂರೈಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ M/s N.S. Enterprises ಸಂಸ್ಥೆಯ ಮೂಲಕ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಒಟ್ಟು 8,91,46,526 ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಕಾಪಿಯರ್ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿ ಬಿಲ್‌ಗಳನ್ನು ಪಾವತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಎನ್.ಆರ್ ರಮೇಶ್ ಆರೋಪಿಸಿದ್ದಾರೆ.
ದೂರಿನ ಪ್ರಕಾರ, 2021-22ರಲ್ಲಿ 35.41 ಲಕ್ಷ, 2022-23ರಲ್ಲಿ 69.63 ಲಕ್ಷ, 2023-24ರಲ್ಲಿ 3.16 ಕೋಟಿ, 2024-25ರಲ್ಲಿ 2.61 ಕೋಟಿ, 2025-26ರಲ್ಲಿ 1.61 ಕೋಟಿ ಹಾಗೂ 2026ರ ಏಪ್ರಿಲ್‌ನಿಂದ ಜೂನ್‌ವರೆಗೆ 47.44 ಲಕ್ಷ ಸೇರಿದಂತೆ ಒಟ್ಟು 8.91 ಕೋಟಿ ಮೊತ್ತದ ಬಿಲ್‌ಗಳನ್ನು ಪಾವತಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿಸಲಾಗಿದೆ.
ಕಂಪ್ಯೂಟರ್, ಪ್ರಿಂಟರ್ ಹಾಗೂ ಕಾಪಿಯರ್‌ಗಳ ಪೂರೈಕೆಯ ಹೆಸರಿನಲ್ಲಿ ಇಷ್ಟು ದೊಡ್ಡ ಮೊತ್ತದ ಬಿಲ್‌ಗಳನ್ನು ಪಾವತಿಸಿರುವುದು ಏಕೆ? ಪೂರೈಕೆಯಾಗಿದೆ ಎನ್ನಲಾದ ಸಾಮಗ್ರಿಗಳು ಪ್ರಸ್ತುತ ಎಲ್ಲಿವೆ? ಅವುಗಳ ಬಳಕೆ ಮತ್ತು ಸ್ವೀಕೃತಿಗೆ ಸಂಬಂಧಿಸಿದ ದಾಖಲೆಗಳು ಯಾವುವು? ಎಂಬ ಹಲವು ಪ್ರಶ್ನೆಗಳನ್ನು ದೂರಿನಲ್ಲಿ ಎನ್.ಆರ್ ರಮೇಶ್ ಎತ್ತಿದ್ದಾರೆ.
ಇದೇ ವೇಳೆ, ಪಾಲಿಕೆಯ ನೌಕರರೊಬ್ಬರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಸಂಸ್ಥೆಯ ಮೂಲಕ ಪಾಲಿಕೆಯ ವಿವಿಧ ಕಚೇರಿಗಳಿಗೆ ಕಂಪ್ಯೂಟರ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ಪೂರೈಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ದೂರಿನಲ್ಲಿ ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಗೋವಿಂದರಾಜನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಬ್ಲೀಚಿಂಗ್ ಪೌಡರ್ ಹಾಗೂ ಸ್ಟೇಷನರಿ ಸಾಮಗ್ರಿಗಳ ಪೂರೈಕೆ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಶಾಂತಿನಗರ ವಿಭಾಗದಲ್ಲಿಯೂ ಇದೇ ರೀತಿಯ ಅಕ್ರಮ ನಡೆದಿದೆ ಎಂಬ ಆರೋಪ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಮತ್ತೊಂದೆಡೆ, M/s N.S. Enterprises ಸಂಸ್ಥೆಯ ಹೆಸರನ್ನು ಬದಲಾಯಿಸಿಕೊಂಡು ಮತ್ತೊಂದು ಹೆಸರಿನಲ್ಲಿ ಪಾಲಿಕೆಯ ಕಚೇರಿಗಳಿಗೆ ಸಾಮಗ್ರಿ ಪೂರೈಕೆ ಮಾಡಲಾಗಿದೆ ಹಾಗೂ ಅನುಮಾನಾಸ್ಪದ ಬಿಲ್‌ಗಳ ಮೂಲಕ ಹಣ ಪಾವತಿಗೆ ಕಡತ ಸಲ್ಲಿಸಲಾಗಿದೆ. ಈ ಕುರಿತು ಅನುಮಾನ ವ್ಯಕ್ತಪಡಿಸಿದ ಉಪ ಹಣಕಾಸು ನಿಯಂತ್ರಕರ ಕಚೇರಿ ಕಡತವನ್ನು ಹಿಂದಕ್ಕೆ ಕಳುಹಿಸಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಶಾಂತಿನಗರ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಬೇಕು. ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಗತ್ಯ ಅನುಮತಿ ನೀಡಿ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ GBA ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್.ಆರ್. ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ : ರಾಜ್ಯದ ಹಲವೆಡೆ ಭಾರೀ ಮಳೆ.. ಕರಾವಳಿಯಲ್ಲಿ ಶಾಲೆಗಳಿಗೆ ರಜೆ!



















