ಮುಂಬೈ : ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ತಂದೆಯ ಆದಾಯದ ಮೂಲದ ಬಗ್ಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಅನುಮಾನ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಅವರಿಗೆ ದೀಪ್ಕೆ ತಿರುಗೇಟು ನೀಡಿದ್ದಾರೆ. ತಮ್ಮ ಅಮೆರಿಕದ ವ್ಯಾಸಂಗವು ಬೋಸ್ಟನ್ ವಿಶ್ವವಿದ್ಯಾಲಯದ ಸ್ಕಾಲರ್‌ಶಿಪ್ (ವಿದ್ಯಾರ್ಥಿವೇತನ) ಮತ್ತು ಶೈಕ್ಷಣಿಕ ಸಾಲದ ಮೂಲಕ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ದೀಪ್ಕೆ, ತಮ್ಮ ಶಿಕ್ಷಣಕ್ಕೆ ಸಂಬಂಧಿಸಿ ಹೊರಿಸಲಾದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.
ಸ್ಕಾಲರ್‌ಶಿಪ್ ಪತ್ರ ಪ್ರದರ್ಶನ
“ನನ್ನ ಶಿಕ್ಷಣಕ್ಕೆ ಬೋಸ್ಟನ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರೆತಿದೆ. ಜೊತೆಗೆ, ನಾನು ಶೈಕ್ಷಣಿಕ ಸಾಲವನ್ನೂ ಪಡೆದಿದ್ದು, ಅದನ್ನು ಮರುಪಾವತಿಸಬೇಕಿದೆ” ಎಂದು ತಿಳಿಸಿದ ದೀಪ್ಕೆ, ಸಂದರ್ಶನದ ವೇಳೆ ತಮ್ಮ ಸ್ಕಾಲರ್‌ಶಿಪ್ ಪತ್ರದ ಪ್ರತಿಯನ್ನೂ ಪ್ರದರ್ಶಿಸಿದ್ದಾರೆ. ಆಗಸ್ಟ್ 1ರಂದು ಸೂರತ್ ಮೂಲದ ಅಮಿತ್ ತಿವಾರಿ ಎಂಬವರು, ದೀಪ್ಕೆ ಅವರ ತಂದೆ, ನಿವೃತ್ತ ಎಂಐಡಿಸಿ (ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ) ಕಿರಿಯ ಎಂಜಿನಿಯರ್ ಭಗವಾನ್‌ರಾವ್ ದೀಪ್ಕೆ ಅವರ ಆರ್ಥಿಕ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಸೇರಿದಂತೆ ಹಲವು ಪ್ರಾಧಿಕಾರಗಳಿಗೆ ದೂರು ನೀಡಿದ್ದರು. ತಿಂಗಳಿಗೆ ಕೇವಲ 60-65 ಸಾವಿರ ರೂಪಾಯಿ ಸಂಪಾದಿಸುವ ಸರ್ಕಾರಿ ಉದ್ಯೋಗಿ ತಮ್ಮ ಮಗನನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳುಹಿಸಲು ಹೇಗೆ ಸಾಧ್ಯ ಎಂದು ಅವರು ದೂರಿನಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ತಮಗೆ ಸಿಕ್ಕಿರುವ ವಿದ್ಯಾರ್ಥಿವೇತನವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ತಿವಾರಿಗೆ ದೀಪ್ಕೆ ತಿರುಗೇಟು ನೀಡಿದ್ದಾರೆ.
ಸಿಜೆಪಿ ಆರ್ಥಿಕ ಮೂಲ ಮತ್ತು ಪಾರದರ್ಶಕತೆಯ ಭರವಸೆ
ಸಿಜೆಪಿ ಪಕ್ಷದ ಭವಿಷ್ಯದ ಆರ್ಥಿಕ ಸಂಪನ್ಮೂಲಗಳ ಬಗ್ಗೆ ಎದುರಾದ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ದೀಪ್ಕೆ, “ಸಿಜೆಪಿ ಮುಂದಿನ ದಿನಗಳಲ್ಲಿ ಕ್ರೌಡ್‌ಫಂಡಿಂಗ್ (ಸಾರ್ವಜನಿಕ ನಿಧಿ ಸಂಗ್ರಹ) ಮೂಲಕ ಜನರಿಂದ ಹಣವನ್ನು ಪಡೆಯಲಿದ್ದು, ಈ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರಲಿದೆ” ಎಂದು ಸ್ಪಷ್ಟಪಡಿಸಿದರು. ನೀಟ್ ಪತ್ರಿಕೆ ಸೋರಿಕೆ ವಿರುದ್ಧದ ಆಂದೋಲನವನ್ನು ಸ್ಮರಿಸಿದ ಅವರು, ಈ ಹೋರಾಟಕ್ಕೆ ಜನಸಾಮಾನ್ಯರಿಂದಲೇ ನೇರ ಬೆಂಬಲ ವ್ಯಕ್ತವಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದ ಜನರೇ ನಮಗೆ ಆಹಾರ ಮತ್ತು ನೀರಿನ ಬಾಟಲಿಗಳನ್ನು ತಂದುಕೊಟ್ಟಿದ್ದರು ಎಂದರು.
ದೆಹಲಿ ಪೊಲೀಸರ ಗುಪ್ತ ಬೆಂಬಲ
ದೆಹಲಿ ಪೊಲೀಸರ ಕೆಲವು ಸಿಬ್ಬಂದಿಯೂ ನಮ್ಮ ಚಳವಳಿಗೆ ಖಾಸಗಿಯಾಗಿ ಬೆಂಬಲ ಸೂಚಿಸಿದ್ದರು ಎಂಬ ಅಚ್ಚರಿಯ ಮಾಹಿತಿಯನ್ನು ದೀಪ್ಕೆ ಹಂಚಿಕೊಂಡಿದ್ದಾರೆ. “ಕೆಲವು ಪೊಲೀಸ್ ಸಿಬ್ಬಂದಿ ನಮ್ಮ ಬಳಿ ಬಂದು, ತಮ್ಮ ಗುರುತು ಬಹಿರಂಗಪಡಿಸದಂತೆ ಕೋರಿ ನೀರಿನ ಬಾಟಲಿಗಳನ್ನು ನೀಡಿದ್ದರು. ಅವರ ಮಕ್ಕಳೂ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ನಮ್ಮ ಹೋರಾಟಕ್ಕೆ ಅವರ ಸಹಾನುಭೂತಿ ಇತ್ತು” ಎಂದು ಅವರು ವಿವರಿಸಿದ್ದಾರೆ.
ಪಿಎಂ ಕೇರ್ಸ್ ಫಂಡ್ ಬಗ್ಗೆ ಪ್ರಶ್ನಿಸಿ
ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಸಿಜೆಪಿಯ ಕಾನೂನು ಮಾನ್ಯತೆ ಮತ್ತು ಕಪಿಲ್ ಸಿಬಲ್ ಅವರ ನೆರವಿನ ಕುರಿತು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ವಕ್ತಾರೆ ವೈಷ್ಣವಿ ಗೌರ್, ಖಾಸಗಿ ವ್ಯಕ್ತಿಯೊಬ್ಬರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. “ಖಾಸಗಿ ವ್ಯಕ್ತಿಯೊಬ್ಬರ ಶಿಕ್ಷಣ ವೆಚ್ಚದ ಬಗ್ಗೆ ಆರ್‌ಟಿಐ ಸಲ್ಲಿಸುವವರು ಪಿಎಂ ಕೇರ್ಸ್ ಫಂಡ್ (PM CARES) ಬಗ್ಗೆಯೂ ಗಮನ ಹರಿಸಬೇಕು. ಮೋದಿ ಜಿ ನಿಮ್ಮನ್ನು ಕ್ಷಮಿಸುತ್ತಾರೆ, ಚಿಂತಿಸಬೇಡಿ” ಎಂದು ಎಕ್ಸ್ (X) ಖಾತೆಯಲ್ಲಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಂಘಟನೆಯ ಆರ್ಥಿಕ ಮೂಲಗಳ ಬಗ್ಗೆ ಎದ್ದಿರುವ ದೂರುಗಳನ್ನು ‘ರಾಜಕೀಯ ಪ್ರೇರಿತ’ ಎಂದು ಸಿಜೆಪಿ ತಳ್ಳಿಹಾಕಿದೆ.
ಇದನ್ನೂ ಓದಿ ; ರಾಂಚಿಯಲ್ಲಿ ವಿದ್ಯಾರ್ಥಿಗಳಿಂದ ‘ಜಂತರ್ ಮಂತರ್’ ಮಾದರಿ ಹೋರಾಟ : ಸಿಜೆಪಿ ಬೆಂಬಲ



















