ಮುಂಬೈ : ಖಾಸಗಿ ಹೋಟೆಲ್‌ಗಳ ವಿರುದ್ಧ ಮಾತ್ರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದ ಕೆಲವೇ ದಿನಗಳಲ್ಲಿ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾದ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ನೇತೃತ್ವದ ತಂಡವು ಹೈಕೋರ್ಟ್‌ನ ಕ್ಯಾಂಟೀನ್‌ಗಳ ಮೇಲೆಯೇ ದಿಢೀರ್ ದಾಳಿ ನಡೆಸಿದೆ.
ತಪಾಸಣೆಯ ವೇಳೆ ಸ್ವಚ್ಛತೆಯ ಕೊರತೆ ಮತ್ತು ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಇಲ್ಲದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘಿಸಿದ ಕ್ಯಾಂಟೀನ್‌ಗಳ ವ್ಯವಹಾರವನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.
“ಕಾನೂನು ಎಲ್ಲರಿಗೂ ಒಂದೇ, ಕೇವಲ ಖಾಸಗಿ ಹೋಟೆಲ್‌ಗಳನ್ನು ಮಾತ್ರ ಏಕೆ ಗುರಿ ಮಾಡುತ್ತೀರಿ?” ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯನ್ನು ಪ್ರಶ್ನಿಸಿತ್ತು. ನ್ಯಾಯಾಲಯದ ಈ ಕಠಿಣ ನಿಲುವಿಗೆ ಬೆನ್ನಲ್ಲೇ ಎಚ್ಚೆತ್ತ FDA ಅಧಿಕಾರಿಗಳು, ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವತಃ ಹೈಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್‌ಗಳ ಮೇಲೆಯೇ ಭರ್ಜರಿ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ದಕ್ಷ ಮತ್ತು ಖಡಕ್ ಅಧಿಕಾರಿಯೆಂದೇ ಹೆಸರಾಗಿರುವ FDA ಆಯುಕ್ತ ಹಾಗೂ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಅವರ ನೇತೃತ್ವದ ವಿಶೇಷ ತಂಡವು ಜುಲೈ 30ರಂದು ಮುಂಬೈನ ಬಾಂಬೆ ಹೈಕೋರ್ಟ್‌ನ ಮುಖ್ಯ ಕಟ್ಟಡ ಮತ್ತು ಅನೆಕ್ಸ್ ಕಟ್ಟಡದಲ್ಲಿರುವ ಕ್ಯಾಂಟೀನ್ ಹಾಗೂ ಜ್ಯೂಸ್ ಸೆಂಟರ್‌ಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಿತು.
ಪತ್ತೆಯಾದ ಗಂಭೀರ ಲೋಪಗಳು:ನ್ಯಾಯ ಒದಗಿಸುವ ಅತ್ಯುನ್ನತ ಸಂಸ್ಥೆಯ ಆವರಣದಲ್ಲೇ ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.ಹಲವು ಕ್ಯಾಂಟೀನ್‌ಗಳು ಕಡ್ಡಾಯವಾಗಿ ಹೊಂದಿರಬೇಕಾದ ಮಾನ್ಯತೆ ಪಡೆದ FSSAI ಪರವಾನಗಿಯನ್ನು ಹೊಂದಿರಲಿಲ್ಲ. ಅಡುಗೆ ಕೋಣೆಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸ್ವಚ್ಛತೆ ಕಂಡುಬಂದಿದೆ.
ಆಹಾರ ತಯಾರಕರು ಮತ್ತು ಸಿಬ್ಬಂದಿ ಗ್ಲೌಸ್ , ಹೆಡ್ ಗೇರ್ ಅಥವಾ ಯಾವುದೇ ಸುರಕ್ಷತಾ ಉಡುಪುಗಳನ್ನು ಧರಿಸಿರಲಿಲ್ಲ.ಈ ಗಂಭೀರ ಲೋಪಗಳನ್ನು ಕಂಡು ಆಕ್ರೋಶಗೊಂಡ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ, ನಿಯಮ ಉಲ್ಲಂಘಿಸಿದ ಕ್ಯಾಂಟೀನ್ ಮಾಲೀಕರಿಗೆ ತಕ್ಷಣವೇ ವ್ಯವಹಾರ ಸ್ಥಗಿತಗೊಳಿಸುವ ನೋಟಿಸ್ ಜಾರಿ ಮಾಡಿದ್ದಾರೆ.
ಲೋಪದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಿ, ಶುಚಿತ್ವ ಕಾಪಾಡುವವರೆಗೂ ಯಾವುದೇ ಕಾರಣಕ್ಕೂ ಕ್ಯಾಂಟೀನ್ ತೆರೆಯುವಂತಿಲ್ಲ ಎಂದು ಕಡಕ್ ಆದೇಶ ನೀಡಿದ್ದಾರೆ.ಕೆಲವೇ ದಿನಗಳ ಹಿಂದೆ ಖಾಸಗಿ ಹೋಟೆಲ್ ಒಂದರ ವಿರುದ್ಧ FDA ಕೈಗೊಂಡಿದ್ದ ಕ್ರಮವನ್ನು ಹೈಕೋರ್ಟ್ ರದ್ದುಗೊಳಿಸಿ, ತಾರತಮ್ಯದ ನೀತಿಯನ್ನು ಪ್ರಶ್ನಿಸಿತ್ತು. ಅದಕ್ಕೆ ಉತ್ತರವೆಂಬಂತೆ FDA ಈಗ ನ್ಯಾಯಾಲಯದ ಆವರಣದಲ್ಲೇ ಈ ಕಾರ್ಯಾಚರಣೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಇಲ್ಲಿದೆ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರ ಪಟ್ಟಿ.. ಇಂದು ಸಂಜೆಯೇ ಪದಗ್ರಹಣ!



















