ಬೆಂಗಳೂರು : ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಕಾವೇರಿ ವಿವಾದವನ್ನು ನಾವೆಲ್ಲ ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ. ರಾಜಕೀಯಕ್ಕಿಂತ ರಾಜ್ಯದ ರೈತರ, ಜನರ ಹಿತ ಮುಖ್ಯ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿಬೆಳೆದಿದ್ದೇನೆ. ನಾನು ಕೂಡ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಮತ್ತು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಏಳುವರೆ ಕೋಟಿ ಜನರಿಗೆ ಯಾವುದೇ ಅನುಮಾನ ಬೇಡ. ಎಲ್ಲ ಸಂದರ್ಭದಲ್ಲಿ ಜನರ ಹಿತ ಕಾಪಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಜನತೆ ಆತಂಕ ಪಡುವುದು ಬೇಡ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಳ್ಳಲಿದೆ. ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ್ದು, CWRC ಶಿಫಾರಸನ್ನು ಸಿಡಬ್ಲ್ಯುಎಂಎ ಆದೇಶವಾಗಿ ಮಾರ್ಪಡಿಸಿತ್ತು. ಪ್ರಕೃತಿ ನಮಗೆ ನೆರವು ನೀಡಿದ್ದರಿಂದ ಸದ್ಯದ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಬರದೆ ಬರದ ಛಾಯೆ ಇದೆ. 35% ಮಳೆ ಮಾತ್ರ ರಾಜ್ಯದಲ್ಲಿ ಬಂದಿದೆ. CWMA 3500 ಕ್ಯೂಸೆಕ್ ಬಿಡುವ ಆದೇಶ ಸಂಕಟ ತಂದಿತ್ತು. 9.5 ಟಿಎಂಸಿ ಬಿಡಬೇಕು ಎಂದು ತಮಿಳುನಾಡು ಸರಕಾರ ವಾದಿಸಿತ್ತು. ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆ ಬಂದಿದೆ. ಕಬಿನಿಯಲ್ಲಿ 24 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಕೆಆರ್‌ಎಸ್ ನಲ್ಲಿ 22 ಕ್ಯೂಸೆಕ್ ನೀರು ಹರಿದು ಬರದುತ್ತಿದೆ. ಕೊಡಗು ಭಾಗದಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿದೆ. ಕುಡಿಯುವ ನೀರಿಗೆ 40 ಟಿಎಂಸಿ ಇಡಬೇಕು ಎಂದು ವಿವರಿಸಿದರು.
ಇದನ್ನೂ ಓದಿ : ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕ.. ಹೀಗೆ ಅರ್ಜಿ ಸಲ್ಲಿಸಿ!



















