ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ ಹೆಲಿಕಾಫ್ಟರ್ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಗರದ ಓವೆಲ್ ಮೈದಾನಕ್ಕೆ ತೆರಳಲಿದ್ದು, ಅಲ್ಲಿ ಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಧಾನಿಗಳನ್ನ ಸ್ವಾಗತಿಸಲಿದ್ದಾರೆ.
ಪ್ರಧಾನಿ ಮೋದಿ ಅವರಿಂದು ಸ್ವಾಮಿ ವಿವೇಕಾನಂದರ ಐತಿಹಾಸಿಕ ಭೇಟಿಯ ನೆನಪಿನಲ್ಲಿ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ನೆಲೆಸಿದ್ದರು ಎನ್ನುವ ನೆನಪಿಗಾಗಿ ಸ್ಮಾರಕ ಹಾಗೂ ಯುವ ಜನರಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಯುವ ಕೇಂದ್ರವನ್ನ ನಿರ್ಮಿಸಲಾಗಿದೆ.
ಸ್ಮಾರಕ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ನಗರದಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಆಶ್ರಮದ ಆಡಿಟೋರಿಯಂನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು 6,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ವಿಶೇಷ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದೆ.



















