ಅಹಮದಾಬಾದ್: ಮಲಯಾಳಂನ ‘ದೃಶ್ಯಂ‘ ಸಿನಿಮಾವನ್ನೂ ಮೀರಿಸುವಂತಹ ಭೀಕರ ಕೊಲೆ ಪ್ರಕರಣವೊಂದನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಪೊಲೀಸರು ಭೇದಿಸಿದ್ದಾರೆ. ಕೆಲಸದ ನಿಮಿತ್ತ ಆಸ್ಟ್ರೇಲಿಯಾದಲ್ಲಿದ್ದಾನೆ ಎಂದೇ ನಂಬಲಾಗಿದ್ದ ವ್ಯಕ್ತಿಯ ಮೃತದೇಹವೇ ಈ ಇಡೀ ಪ್ರಕರಣದ ತಿರುಳು. ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಜಿಗ್ನೇಶ್ ಮವಾಡಿಯಾ ಎಂಬ ವ್ಯಕ್ತಿಯ ಅಸ್ಥಿಪಂಜರವು ಕಾರ್ಖಾನೆಯೊಂದರ 12 ಅಡಿ ಆಳದ ಕಾಂಕ್ರೀಟ್ ನೆಲದ ಅಡಿಯಲ್ಲಿ ಪತ್ತೆಯಾಗಿದೆ.
ಜಿಗ್ನೇಶ್ ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಅವರ ಕಂಪನಿಯು ಫೋನ್ ಕರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ, ಹೀಗಾಗಿ ಅವರು ಕರೆ ಸ್ವೀಕರಿಸುತ್ತಿಲ್ಲ ಎಂದು ಅವರ ಪತ್ನಿ ಪೃಥ್ವಿ (ಭೂಮಿಬೆನ್) ಈವರೆಗೆ ಕುಟುಂಬದವರನ್ನು ನಂಬಿಸುತ್ತಾ ಬಂದಿದ್ದಳು. ಆದರೆ, ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲು ಯೋಜಿಸಿದ್ದ ಜಿಗ್ನೇಶ್ ಅವರ ಸೋದರ ಸಂಬಂಧಿಯೊಬ್ಬರು ಜಿಗ್ನೇಶ್ ಅವರ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕೇಳಿದಾಗ ಅದನ್ನು ನೀಡಲು ಪತ್ನಿ ತಡಕಾಡಿದ್ದಳು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಜುಲೈ 26 ರಂದು ದೂರು ದಾಖಲಿಸಿದಾಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಸೈನೈಡ್ ನೀಡಿ ಕೊಲೆಗೈದು 12 ಅಡಿ ಆಳದಲ್ಲಿ ಹೂತರು!
ಪೊಲೀಸ್ ತನಿಖೆಯ ಪ್ರಕಾರ, ಪತ್ನಿ ಪೃಥ್ವಿ ತನ್ನ ಪ್ರಿಯಕರ ನಿಲೇಶ್ ಕಛಟಿಯಾ ಮತ್ತು ಆತನ ಗೆಳೆಯ ಬಲವೀರ್ ವರ್ಮಾ ಜೊತೆಗೂಡಿ ತನ್ನ ಪತಿಯನ್ನೇ ಕೊಲೆಗೈದಿದ್ದಾಳೆ. ಮೇ 31, 2024ರಂದು ಪಾರ್ಟಿ ಮಾಡುವ ನೆಪದಲ್ಲಿ ಜಿಗ್ನೇಶ್ ಅವರನ್ನು ಕೈಗಾರಿಕಾ ಶೆಡ್‌ಗೆ ಕರೆಸಿಕೊಂಡ ಆರೋಪಿಗಳು, ಮದ್ಯದಲ್ಲಿ ಸೈನೈಡ್ ಬೆರೆಸಿ ಕುಡಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು 12 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಿ, ಅದರ ಮೇಲೆ ಒಂದು ಅಡಿ ದಪ್ಪದ ಕಾಂಕ್ರೀಟ್ ಪದರವನ್ನು ಹಾಕಿ ಸಾಕ್ಷ್ಯ ನಾಶಪಡಿಸಿದ್ದರು. ಗುರುವಾರ (ಜುಲೈ 30) ಸ್ಥಳಕ್ಕೆ ತೆರಳಿದ ಪೊಲೀಸರು ಡ್ರಿಲ್ಲಿಂಗ್ ಯಂತ್ರಗಳ ಸಹಾಯದಿಂದ ಕಾಂಕ್ರೀಟ್ ಒಡೆದು ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ.
ಪತ್ನಿ ಸೇರಿದಂತೆ ಮೂವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಪೃಥ್ವಿ, ಆಕೆಯ ಪ್ರಿಯಕರ ನಿಲೇಶ್ ಹಾಗೂ ಆತನ ಸ್ನೇಹಿತ ಬಲವೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಶಪಡಿಸಿಕೊಂಡಿರುವ ಅಸ್ಥಿಪಂಜರವನ್ನು ಡಿಎನ್‌ಎ ಹಾಗೂ ವೈಜ್ಞಾನಿಕ ಪರೀಕ್ಷೆಗಾಗಿ ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಪ್ರತಿಭಾ ತಿಳಿಸಿದ್ದಾರೆ.
ಇದನ್ನೂ ಓದಿ : ‘ನನ್ನ ವಯಸ್ಸು ಕೇವಲ 15, ಕ್ಷಮಿಸಿ’ : ಪ್ರಧಾನಿ ಮೋದಿಯನ್ನು ನಿಂದಿಸಿದ್ದ ಯುವತಿಯ ಪಶ್ಚಾತ್ತಾಪದ ವಿಡಿಯೋ ವೈರಲ್!



















