ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದ ಯುವತಿಯೊಬ್ಬಳು ಇದೀಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೈಮುಗಿದು ಕ್ಷಮೆ ಯಾಚಿಸಿರುವ ಈ ಯುವತಿ, ತಾನು ಕೆಲವರ ಪ್ರಚೋದನೆಗೆ ಒಳಗಾಗಿ ಪ್ರಧಾನಿಯವರ ವಿರುದ್ಧ ತಪ್ಪಾಗಿ ಕೆಟ್ಟ ಮಾತುಗಳನ್ನು ಆಡಿದ್ದಾಗಿ ಹೇಳಿಕೊಂಡಿದ್ದಾಳೆ. ಇದು ನನ್ನ “ಮೊದಲ ಹಾಗೂ ಕೊನೆಯ ತಪ್ಪು” ಎಂದು ಕರೆದಿರುವ ಆಕೆ, ದೇಶದ ಜನತೆಯಲ್ಲಿ ಕ್ಷಮೆ ಕೋರಿದ್ದಾಳೆ.
ಎಫ್‌ಐಆರ್ ಬೆನ್ನಲ್ಲೇ ವಯಸ್ಸಿನ ಗೊಂದಲ
ಈ ಹಿಂದೆ ಪ್ರಧಾನಿ ಹುದ್ದೆಯ ಘನತೆಗೆ ಕುಂದು ತಂದಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಜೀರೋ ಎಫ್‌ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪೊಲೀಸ್ ದೂರಿನಲ್ಲಿ ಯುವತಿಯ ವಯಸ್ಸು 25 ವರ್ಷ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಪ್ರಸ್ತುತ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಯುವತಿಯು, “ನನಗೆ ಕೇವಲ 15 ವರ್ಷ ವಯಸ್ಸು. ನಾನು ಮಾಡಿದ ತಪ್ಪು ಕ್ಷಮಾರ್ಹವಲ್ಲದ್ದು, ನನಗೆ ಸ್ವತಃ ನನ್ನ ಮುಖ ನೋಡಿಕೊಳ್ಳಲು ನಾಚಿಕೆಯಾಗುತ್ತಿದೆ” ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ.
ಪ್ರಧಾನಿ ಮೋದಿ ವಿಡಿಯೋ ಬೆನ್ನಲ್ಲೇ ವೈರಲ್
ವಿಶೇಷವೆಂದರೆ, ಈ ಕ್ಷಮಾಪಣೆಯ ವಿಡಿಯೋ ಹೊರಬೀಳುವ ಕೆಲವೇ ಗಂಟೆಗಳ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಜಂತರ್ ಮಂತರ್‌ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ಪ್ರಧಾನಿಯವರು, ದಾರಿ ತಪ್ಪಿದ ಯುವಜನತೆಯನ್ನು ಶಿಕ್ಷಿಸುವ ಬದಲು ಸರಿ ದಾರಿಗೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಬೈಗುಳಗಳಿಂದ ಯಾವುದಕ್ಕೂ ಪರಿಹಾರ ಸಿಗುವುದಿಲ್ಲ ಎಂದಿದ್ದ ಮೋದಿ, “ಚಿಕ್ಕ ವಯಸ್ಸಿನಲ್ಲಿ ತಪ್ಪುಗಳು ಆಗುವುದು ಸಹಜ, ಅದೇ ವಯಸ್ಸಿನಲ್ಲಿ ತಿದ್ದಿಕೊಳ್ಳಲು ಅವಕಾಶವೂ ಇರುತ್ತದೆ. ಕೋಪ ಅಥವಾ ಸೇಡಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅವರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡುವುದರಿಂದ ಅಥವಾ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ, ಸಮಾಜವೂ ಅವರನ್ನು ಕ್ಷಮಿಸಿ ಸರಿಯಾದ ದಾರಿ ತೋರಿಸಬೇಕು” ಎಂದು ಮನವಿ ಮಾಡಿದ್ದರು. ಪ್ರಧಾನಿಯವರ ಈ ಭಾವನಾತ್ಮಕ ಕರೆಯ ಬೆನ್ನಲ್ಲೇ ಈ ಕ್ಷಮಾಪಣೆಯ ವಿಡಿಯೋ ಪ್ರತ್ಯಕ್ಷವಾಗಿದೆ.



















