ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ದೇಶಾದ್ಯಂತ ವಿದ್ಯಾರ್ಥಿಗಳ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಸೋಮವಾರ ಸಂಸತ್ ಭವನದಲ್ಲಿ ಆಡಳಿತಾರೂಢ ಎನ್‌ಡಿಎ ಸಂಸದರು ಅದ್ಧೂರಿ ಹಾಗೂ ಭವ್ಯ ಸ್ವಾಗತ ನೀಡಿದ್ದಾರೆ. ರಾಜೀನಾಮೆ ನೀಡಿದ ಎರಡೇ ದಿನಗಳಲ್ಲಿ ಸಂಸತ್ತಿಗೆ ಆಗಮಿಸಿದ ಅವರನ್ನು ಎನ್‌ಡಿಎ ನಾಯಕರು ಒಗ್ಗಟ್ಟಿನಿಂದ ಮೆರವಣಿಗೆಯ ಮಾದರಿಯಲ್ಲಿ ಒಳಗೆ ಕರೆದುಕೊಂಡು ಗೌರವಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಕರ ದ್ವಾರದಲ್ಲಿ ಎನ್‌ಡಿಎ ಸಂಸದರ ಬೆಂಬಲ
ಸಂಸತ್ ಭವನದ ಮಕರ ದ್ವಾರದ ಬಳಿ ಮುಂಚಿತವಾಗಿಯೇ ನೆರೆದಿದ್ದ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಸಂಸದರು ಧರ್ಮೇಂದ್ರ ಪ್ರಧಾನ್ ಅವರ ಆಗಮನಕ್ಕಾಗಿ ಕಾಯುತ್ತಿದ್ದರು. ಪ್ರಧಾನ್ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಾಂಪ್ರದಾಯಿಕ ಟೋಪಿ ಧರಿಸಿ, ಹಾರ ಹಾಕಿ ಗೌರವಿಸಿದ ಸಂಸದರು, “ಧರ್ಮೇಂದ್ರ ಪ್ರಧಾನ್ ಜಿಂದಾಬಾದ್” ಎಂದು ಘೋಷಣೆಗಳನ್ನು ಕೂಗುತ್ತಾ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ಜುಲೈ 25 ರಂದು ರಾಜೀನಾಮೆ ನೀಡಿದ್ದ ಪ್ರಧಾನ್, ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಮತ್ತು ಈ ಹೋರಾಟವನ್ನು ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.
ಮಕರ ದ್ವಾರದಲ್ಲೇ ಪ್ರತಿಪಕ್ಷಗಳ ‘ಶಿಕ್ಷಾ ಚೋರಿ’ ಪ್ರತಿಭಟನೆ
ಇನ್ನೊಂದೆಡೆ, ಮಕರ ದ್ವಾರದ ಬಳಿಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. “ಶಿಕ್ಷಾ ಚೋರಿ” (ಶಿಕ್ಷಣದ ಕಳ್ಳತನ) ಎಂದು ಘೋಷಣೆ ಕೂಗಿದ ನಾಯಕರು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಠಿಣ ಕಾನೂನು ತರಲು ಉದ್ದೇಶಿಸಿರುವ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026’ ಅನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ. ಆದರೆ, ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಬೇಕು, ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿರುವ ಕಾರಣ, ಕಲಾಪ ಇಂದೂ ಸುಗಮವಾಗಿ ನಡೆದಿಲ್ಲ. ಭಾರೀ ಕೋಲಾಹಲದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು.
ಇದನ್ನೂ ಓದಿ : “ಪ್ರತಿಭಟನೆ ನಡೆಯುತ್ತಿದೆ ಎಂದ ಮಾತ್ರಕ್ಕೆ ಲಾಠಿ ಪ್ರಹಾರ ಮಾಡುವಂತಿಲ್ಲ” : ದೆಹಲಿ ಪೊಲೀಸ್ ಕ್ರಮಕ್ಕೆ ಸುಪ್ರೀಂ ತರಾಟೆ!


















