ಉಡುಪಿ : ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶಿರೂರು ಮಠ ಹಾಗೂ ವಾಮನ ವಿಠಲ ಟ್ರಸ್ಟ್ ಇವರ ಸಹಯೋಗದೊಂದಿಗೆ ಜಯಪ್ರಿಯ ಮೆಡಿಕಲ್ ಫೌಂಡೇಶನ್, ಹುಬ್ಬಳ್ಳಿ ಮತ್ತು ಹಯಗ್ರೀವ ವೈದ್ಯಕೀಯ ಹಾಗೂ ಮಹಿಳಾ ಆರೋಗ್ಯ ಚಿಕಿತ್ಸಾಲಯ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಆಗಸ್ಟ್ 2ರಂದು ಮಠದ ರಾಜಾಂಗಣದಲ್ಲಿ ಉಚಿತ ಸಮಗ್ರ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. “ನಿಮ್ಮ ಆರೋಗ್ಯ, ನಿಮ್ಮ ದೃಷ್ಟಿ” ನಮ್ಮ ಆದ್ಯತೆ’ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ, ಅಗತ್ಯ ಸಲಹೆ ಹಾಗೂ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

ಶಿಬಿರದಲ್ಲಿ ಮಧುಮೇಹ ತಜ್ಞರಾದ ಡಾ. ಹರ್ಷ ಎನ್.ಎಸ್, ನೇತ್ರ ತಜ್ಞರಾದ ಡಾ. ವೆಂಕಟರಾಮ್ ಕಟ್ಟಿ, ಇ.ಎನ್.ಟಿ. ತಜ್ಞರಾದ ಡಾ. ಪ್ರಿಯಾ ಕಟ್ಟಿ, ಮಹಿಳಾ ಆರೋಗ್ಯ ತಜ್ಞರಾದ ಡಾ. ಕಲಾ ಕಟ್ಟಿ ಹಾಗೂ ಸಂಕೀರ್ಣ ಆರೋಗ್ಯ ಸಮಸ್ಯೆಗಳ ಪರಿಹಾರದ ತಜ್ಞ ವೈದ್ಯರಾದ ಡಾ. ರಾಘವೇಂದ್ರ ಉಡುಪ ಅವರು ತಪಾಸಣೆ ನಡೆಸಲಿದ್ದಾರೆ.
ಸಮಗ್ರ ಸಾಮಾನ್ಯ ಆರೋಗ್ಯ ತಪಾಸಣೆಯಲ್ಲಿ ಲಭ್ಯವಿರುವ ಸೌಲಭ್ಯಗಳು :
- ಸಾಮಾನ್ಯ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಸಲಹೆ
- ಮಹಿಳಾ ಆರೋಗ್ಯ ಮತ್ತು ಸ್ತ್ರೀರೋಗ ತಪಾಸಣೆ
- ಕಿವಿ, ಮೂಗು ಮತ್ತು ಗಂಟಲು (ಇ.ಎನ್.ಟಿ.) ತಪಾಸಣೆ
- ರಕ್ತದೊತ್ತಡ (ಬಿ.ಪಿ.) ಪರೀಕ್ಷೆ
- ಮಧುಮೇಹ ಪರೀಕ್ಷೆ
- ತೂಕ ಪರೀಕ್ಷೆ
- ಆರೋಗ್ಯ ಸ್ಥಿತಿಯ ಮೌಲ್ಯಮಾಪನ
- ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆ
- ವೈಯಕ್ತಿಕ ಆರೋಗ್ಯ ಸಲಹೆ ಮತ್ತು ಕೌನ್ಸೆಲಿಂಗ್
- ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ
ಸಮಗ್ರ ನೇತ್ರ ತಪಾಸಣೆಯಲ್ಲಿ ಲಭ್ಯವಿರುವ ಸೌಲಭ್ಯಗಳು :
- ದೂರ ಮತ್ತು ಸಮೀಪದ ದೃಷ್ಟಿ ಪರೀಕ್ಷೆ
- ಕನ್ನಡಕದ ಪವರ್ ಪರೀಕ್ಷೆ
- ಕಣ್ಣಿನ ಒತ್ತಡ ಪರೀಕ್ಷೆ ಹಾಗೂ ಗ್ಲಕೋಮಾ ತಪಾಸಣೆ
- ಸ್ಲಿಟ್ ಲ್ಯಾಂಪ್ ಮೂಲಕ ಕಣ್ಣಿನ ಪರೀಕ್ಷೆ
- ಕಣ್ಣಿನ ಹಿಂಭಾಗದ (ಫಂಡಸ್) ಪರೀಕ್ಷೆ ಮತ್ತು ರೆಟಿನಾ ತಪಾಸಣೆ
- ಕಣ್ಣಿನ ಪೊರೆ (ಕ್ಯಾಟರಾಕ್ಟ್) ತಪಾಸಣೆ
- ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳ ತಪಾಸಣೆ
- ಕಣ್ಣಿನ ಒಣತನ ಮತ್ತು ಅಲರ್ಜಿ ತಪಾಸಣೆ
- ಇತರ ಸಾಮಾನ್ಯ ಕಣ್ಣಿನ ಕಾಯಿಲೆಗಳ ತಪಾಸಣೆ
- ಕಣ್ಣಿನ ಆರೋಗ್ಯದ ಕುರಿತು ತಜ್ಞರ ಸಲಹೆ
ಹಿರಿಯ ನಾಗರಿಕರು, ದೃಷ್ಟಿ ಸಮಸ್ಯೆ ಇರುವವರು, ಕಣ್ಣಿನ ಪೊರೆ ಅಥವಾ ಇತರ ಕಣ್ಣಿನ ಕಾಯಿಲೆ ಹೊಂದಿರುವವರು, ಕಿವಿ–ಮೂಗು–ಗಂಟಲಿನ ಸಮಸ್ಯೆ ಇರುವವರು, ತಲೆನೋವು ಅಥವಾ ಕಣ್ಣಿನ ಸಮಸ್ಯೆ ಇರುವವರು, ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವವರು, ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ಮತ್ತು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಬಯಸುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.
ಇನ್ನು, ಶಿಬಿರದ ವಿಶೇಷ ಸೌಲಭ್ಯವಾಗಿ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ನೀಡಲಾಗುವುದು. ಅಗತ್ಯವಿರುವವರಿಗೆ ಉಚಿತ ಕಣ್ಣಿನ ಹನಿಗಳನ್ನೂ ಪೂರೈಸಲಾಗುವುದು. ಹೆಚ್ಚಿನ ತಪಾಸಣೆ ಅಥವಾ ಚಿಕಿತ್ಸೆಯ ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಶಿಬಿರದಲ್ಲಿ ಸುಮಾರು 500 ಜನರಿಗೆ ಸಮಗ್ರ ಆರೋಗ್ಯ ಮತ್ತು ನೇತ್ರ ತಪಾಸಣೆ ನಡೆಸುವ ಗುರಿ ಹೊಂದಲಾಗಿದ್ದು, 250 ಅರ್ಹ ಫಲಾನುಭವಿಗಳಿಗೆ ಉಚಿತ ಸಮೀಪದೃಷ್ಟಿ ಕನ್ನಡಕಗಳನ್ನು ನೀಡಲಾಗುವುದು. ದೃಷ್ಟಿ ಪರೀಕ್ಷೆಯ ಆಧಾರದ ಮೇಲೆ ಅಗತ್ಯವಿರುವವರಿಗೆ ದೂರದೃಷ್ಟಿ ಕನ್ನಡಕಗಳನ್ನು ಒದಗಿಸಲಾಗುವುದು. ಅಲ್ಲದೆ, ಅಗತ್ಯವಿರುವ ರೋಗಿಗಳಿಗೆ 200 ಉಚಿತ ಕಣ್ಣಿನ ಹನಿಗಳನ್ನು ನೀಡಲಾಗುವುದು.
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಶಿಬಿರದಲ್ಲಿ ಹೆಚ್ಚಿನ ಪರೀಕ್ಷೆ, ಔಷಧೋಪಚಾರ, ಲೇಸರ್ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಅಗತ್ಯವಿರುವವರಿಗೆ ಜಯಪ್ರಿಯ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲು ವಿಶೇಷ ಮಾರ್ಗದರ್ಶನವನ್ನೂ ನೀಡಲಾಗುತ್ತದೆ.
ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಆರೋಗ್ಯ ತಪಾಸಣೆ ಅಗತ್ಯವಿರುವ ಕುಟುಂಬಸ್ಥರು, ಹಿರಿಯರು ಹಾಗೂ ಅರ್ಹರಿಗೆ ಈ ಮಾಹಿತಿಯನ್ನು ತಿಳಿಸಿ, ಆಗಸ್ಟ್ 2ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಶಿಬಿರಕ್ಕೆ ಭೇಟಿ ನೀಡಿ ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : SIR ಅಂತಿಮ ಹಂತಕ್ಕೆ.. 75-80 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರ ಬೀಳುವ ಸಾಧ್ಯತೆ!



















