ಬೆಂಗಳೂರು, ಜು.27 : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಪರಿಶೀಲನೆ ವೇಳೆ ಸುಮಾರು 75 ರಿಂದ 80 ಲಕ್ಷ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಸಂಜೆವರೆಗಿನ ಪರಿಶೀಲನಾ ಮಾಹಿತಿಯ ಪ್ರಕಾರ, 68.28 ಲಕ್ಷ ಮತದಾರರು ಇನ್ನೂ ಪತ್ತೆಯಾಗಿಲ್ಲ. ಇವರಿಗೆ ಗಣತಿ ನಮೂನೆ (Enumeration Form) ವಿತರಿಸಲು ಸಾಧ್ಯವಾಗಿಲ್ಲ. ಅಂತಿಮ ಹಂತದ ಪರಿಶೀಲನೆಯ ನಂತರ ಕರಡು ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗುವ ಸಾಧ್ಯತೆ ಇದೆ.
ಪರಿಶೀಲನೆಯಲ್ಲಿ 41.04 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 13.50 ಲಕ್ಷ ಮತದಾರರು ಮೃತಪಟ್ಟಿರುವುದು, ಹಾಗೂ 4.59 ಲಕ್ಷ ಮತದಾರರು ಎರಡು ಕಡೆ ಮತದಾರರಾಗಿ ಅಥವಾ ನಕಲಿ ಮತದಾರರಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇನ್ನು 21,253 ಮಂದಿ ಇತರೆ ವರ್ಗಕ್ಕೆ ಸೇರಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯೂ ವೇಗವಾಗಿ ನಡೆಯುತ್ತಿದೆ. ಒಟ್ಟು 5,54,32,314 ಗಣತಿ ನಮೂನೆಗಳ ಪೈಕಿ 4,10,29,987 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದು 74.02% ಪ್ರಗತಿಗೆ ಸಮಾನವಾಗಿದೆ. ಅಲ್ಲದೆ, 6,41,393 ಮತದಾರರು ಆನ್‌ಲೈನ್ ಮೂಲಕವೇ ತಮ್ಮ ವಿವರಗಳನ್ನು ಸಲ್ಲಿಸಿದ್ದಾರೆ. ಈ ಅಂಕಿ-ಅಂಶಗಳು ಅಂತಿಮ ಪರಿಶೀಲನೆ ಆಧಾರಿತವಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಧಿಕೃತ ಸಂಖ್ಯೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ : ರೌಡಿ ಪಟ್ಟಿಯ ಕ್ರಿಮಿನಲ್‌ಗಳಿಗೆ ಗುತ್ತಿಗೆ ಕಾರ್ಯಾದೇಶ ಪತ್ರ : ಭ್ರಷ್ಟ ACF ವಿರುದ್ಧ ಎನ್.ಆರ್. ರಮೇಶ್ ದೂರು!



















