ಉತ್ತರ ಕನ್ನಡ : ಗೋಮಾತೆಯ ಗೌರವ ಹಾಗೂ ಸಂರಕ್ಷಣೆಗಾಗಿ ರಾಜ್ಯಾದ್ಯಂತ ‘ಗೋಮಾತೆಯ ಗೌರವ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದ್ದು, ಇದೀಗ ಅಭಿಯಾನದ 2ನೇ ಹಂತವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಸಂಗ್ರಹಿಸಿದ ಸಹಿಯೊಂದಿಗೆ ಜಿಲ್ಲಾಧಿಕಾರಿಯವರಿಗೆ ಇದೇ ಜುಲೈ 27ರಂದು 13 ತಾಲೂಕಿನ ಗೋ ಪ್ರೇಮಿಗಳು, ಗೋ ರಕ್ಷಕರು, ಗೋ ಭಕ್ತರು ಹಾಗೂ ಸಮಸ್ತ ಹಿಂದೂ ಸಮಾಜ ಬಾಂಧವರು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಮೂರು ಜಿಲ್ಲೆಯ ಅಭಿಯಾನದ ಗೋಮಾತೆಯ ಗೌರವದ ಆಹ್ವಾನವು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದು, ಗುರೂಜಿಯವರು ಮೂರು ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಬೈಂದೂರಿನ ಗಜೇಂದ್ರ ಎಸ್. ಬೇಲೆಮನೆ ಮತ್ತು ನಾಗರಾಜ್ ಪೂಜಾರಿಯವರಿಗೆ ನೀಡಿದ್ದಾರೆ.
ಇದೊಂದು ರಾಷ್ಟ್ರ ಮಟ್ಟದ ದೊಡ್ಡ ಹೋರಾಟವಾಗಿದ್ದು ಗೋಮಾತೆಯ ರಕ್ಷಣೆಗೆ ಕಡೆಯ ಕೂಗಾಗಿದೆ. ದೇಶದ ಸಾಧು-ಸಂತರುಗಳ ಕೂಡುವಿಕೆಯಲ್ಲಿ ಆಯೋಜಿಸಲಾದ ಹೋರಾಟವಾಗಿದ್ದು, ನಾಲ್ಕು ಹಂತದಲ್ಲಿ ಈ ಅಭಿಯಾನವು ನಡೆಯುತ್ತದೆ.
ಮೊದಲನೆಯದಾಗಿ ತಾಲೂಕು ಮಟ್ಟದ ಅಭಿಯಾನ, ತಾಲೂಕಿನ ತಹಶೀಲ್ದಾರರಿಗೆ ಸಂಗ್ರಹಿಸಿದ ಸಹಿಯೊಂದಿಗೆ ಮನವಿ ನೀಡುವುದರ ಮುಖೇನ ಅಭಿಯಾನ ನಡೆದಿದ್ದು, ಈ ಅಭಿಯಾನವು ಯಶಸ್ವಿಯಾಗಿದ್ದಲ್ಲದೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವುದರ ಮೂಲಕ ದಾಖಲೆಯಾಗಿತ್ತು.
ಇದೀಗ ಎರಡನೇ ಹಂತದ ಹೋರಾಟವು ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಇನ್ನು ಮುಂದಿನ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಈ ಹೋರಾಟವು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದ್ದು, ಹಾಗೆಯೇ ನಂತರ ಜನವರಿ 2027ರಲ್ಲಿ ರಾಷ್ಟ್ರ ಮಟ್ಟದ ಮಹಾ ಅಭಿಯಾನವು ನಡೆಯಲಿದೆ.
ಯಾವುದೇ ಹಂತದಲ್ಲಿ ಈ ಹೋರಾಟಕ್ಕೆ ಜಯ ಸಿಕ್ಕಿದಲ್ಲಿ ಹೋರಾಟವನ್ನು ಅಲ್ಲಿಗೆ ಕೈಬಿಟ್ಟು ದೇಶದ ಸಾಧು ಸಂತರು ಹಾಗೂ ಗೋ ಭಕ್ತರು, ಗೋ ರಕ್ಷಕರಿಂದ ಅಭೂತಪೂರ್ವ ಗೌರವವನ್ನು ಕೂಡ ಸಲ್ಲಿಸಲಿಸಲಾಗುತ್ತದೆ. ಒಂದು ವೇಳೆ ಈ ಹೋರಾಟಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕದಿದ್ದಲ್ಲಿ ಮುಂದಿನ ಹಂತದಲ್ಲಿ ದೇಶದ 108 ಜನ ಸಾಧು ಸಂತರುಗಳು ಗೋ ಮಾತೆಯ ಉಳಿವಿಗಾಗಿ, ಗೋ ಮಾತೆಯ ಅಸ್ತಿತ್ವಕ್ಕಾಗಿ 2027 ಏಪ್ರಿಲ್ ತಿಂಗಳಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳಲಿದ್ದಾರೆ. 108 ಜನ ಸಾಧು ಸಂತರುಗಳಲ್ಲಿ ಗೋ ಪ್ರೇಮಿ, ಗೋ ಭಕ್ತರಾದ ಉಡುಪಿ ಜಿಲ್ಲೆಯ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಕೂಡ ಒಬ್ಬರಾಗಿದ್ದಾರೆ.
ಗೋಮಾತೆಯ ಗೌರವದ ಅಭಿಯಾನದ ಮುಖ್ಯ ಉದ್ದೇಶಗಳು :
ರಾಷ್ಟ್ರ ಮತ್ತು ಭಾರತೀಯ ಸಂಸ್ಕೃತಿಯ ಹಿತ ದೃಷ್ಟಿಯಿಂದ ಸಂವಿದಾನದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ದೇಶದ ಎಲ್ಲಾ ರಾಜ್ಯ ಸರಕಾರಗಳಿಂದ ಅಹಿಂಸಾತ್ಮಕ ರೀತಿಯಲ್ಲಿ ನೆಲೆಸಿ ಪ್ರಾರ್ಥಿಸುವ ಮೂಲಕ ಇಡೀ ಭಾರತೀಯ ಸ್ಥಳಿಯ ಗೋ ತಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸುವುದು.
- ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು
- ಹಸುವಿಗೆ ರಾಷ್ಟ್ರ ಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪೂಜೆ, ರಾಷ್ಟ್ರೀಯ ಪರಂಪರೆ ಹಾಗೂ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾನ್ವಿತ ಸ್ಥಾನ ಮಾನ ನೀಡಬೇಕು.
- ಗೋ ಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು ಮತ್ತು ಗೋ ಸೇವೆಗಾಗಿ ಕೇಂದ್ರೀಯ ಸಚಿವಾಲಯವನ್ನು ಸ್ಥಾಪಿಸಬೇಕು.
- ಗೋ ಚಾರ ಮಂಡಳಿಯನ್ನು ರಚಿಸಬೇಕು, ಮೇವು ಭದ್ರತಾ ನೀತಿಯನ್ನು ಅಂತಿಮ ಗೊಳಿಸಬೇಕು, ಗೋವು ಆಧಾರಿತ ಕೃಷಿಯನ್ನು ಖಚಿತ ಪಡಿಸಿಕೊಳ್ಳಬೇಕು ಮತ್ತು ವೇದ ಲಕ್ಷಣ ಗೋ ವಂಶದ ಜಾನುವಾರುಗಳಿಂದ ಪಡೆದ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಬೇಕು.
ಇದನ್ನೂ ಓದಿ : ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು – ಸೋನಮ್ ವಾಂಗ್ಚುಕ್ ಫಸ್ಟ್ ರಿಯಾಕ್ಷನ್



















