ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ಧಾರೆ. ಸಿಜೆಪಿ ಪ್ರತಿಭಟನೆ ಹಾಗೂ ಪ್ರತಿಪಕ್ಷಗಳ ಭಾರಿ ಪ್ರತಿರೋಧದ ಹಿನ್ನೆಲೆಯಲ್ಲಿ ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ವಿಜಯೋತ್ಸವ ಆಚರಿಸುತ್ತಿದ್ದು, ‘ವಿದ್ಯಾರ್ಥಿಗಳ ಶಕ್ತಿ ಚಿರಾಯುವಾಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಹೊಸದಾಗಿ ರೂಪುಗೊಂಡ ವಿಡಂಬನಾತ್ಮಕ ರಾಜಕೀಯ ಪಕ್ಷವಾದ ಸಿಜೆಪಿಯ ಸದಸ್ಯರು, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನ್ ಅವರ ರಾಜೀನಾಮೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿ ಜೂನ್‌ನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದರು. ಇಂದು ಸಿಜೆಪಿ ಮತ್ತು ಕೇಂದ್ರದ ನಡುವಿನ ಮೂರನೇ ಸುತ್ತಿನ ಮಾತುಕತೆ ಹೊತ್ತಿನಲ್ಲೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಪ್ರಧಾನ್ ರಾಜೀನಾಮೆ ಘೋಷಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಘೋಷಣೆಯ ಬೆನ್ನಲ್ಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?
ಮೊದಲ ದಿನದಿಂದಲೇ, ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡೆ. ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ. ‘ಪರೀಕ್ಷಾ ಮಾಫಿಯಾ’ದಿಂದ ಯಾವುದೇ ಪ್ರತಿಭಾನ್ವಿತ ವಿದ್ಯಾರ್ಥಿಯ ಸಾಮರ್ಥ್ಯ ಹಾಳಾಗಬಾರದು. ಯಾವುದೇ ವಿದ್ಯಾರ್ಥಿಗೆ ಯಾವುದೇ ಅನ್ಯಾಯವಾಗಬಾರದು ಎಂದು ನಾನು ದೃಢನಿಶ್ಚಯ ಮಾಡಿದ್ದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದ ಬಲದಲ್ಲಿ ನಾನು ಯಾವಾಗಲೂ ಅಚಲ ನಂಬಿಕೆಯನ್ನು ಹೊಂದಿದ್ದೇನೆ. ಯುವಕರ ಆಕಾಂಕ್ಷೆಗಳು, ಕನಸುಗಳು ಮತ್ತು ನಿರೀಕ್ಷೆಗಳನ್ನು ಗೌರವಿಸುತ್ತೇನೆ. ಅವರು ಕೇವಲ ಭಾರತದ ಭವಿಷ್ಯದಲ್ಲ. ಅವರು ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಜ್ಯೋತಿ ಧಾರಕರು, ಸೃಷ್ಟಿಕರ್ತರು ಮತ್ತು ವಾಸ್ತುಶಿಲ್ಪಿಗಳು. ಘಟನೆಯಿಂದಾಗಿ ಕಳೆದ ಹತ್ತು ದಿನಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ ಎಂದು ಸಚಿವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೊನೆಗೂ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – CJP ಹೋರಾಟಕ್ಕೆ ದೊಡ್ಡ ಜಯ!


















