ನವದೆಹಲಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿರುವ ಬೃಹತ್ ಹೋರಾಟವು ಭಾರತದ ಇತಿಹಾಸದಲ್ಲೇ ‘ಜೆನ್ ಝೀ’ (Gen Z) ಪೀಳಿಗೆ ನಡೆಸಿದ ಮೊದಲ ದೊಡ್ಡ “ಡಿಜಿಟಲ್ ಬಂಡಾಯ” ಎಂದು ಪ್ರಸಿದ್ಧ ಲೇಖಕ ಚೇತನ್ ಭಗತ್ ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ರೀಲ್ಸ್ಗಳು ಮತ್ತು ವೈರಲ್ ವೀಡಿಯೊಗಳು ಲಕ್ಷಾಂತರ ಯುವಜನರ ಆಕ್ರೋಶವನ್ನು ಸಂಘಟಿಸಿ, ಇದನ್ನು ದೇಶವ್ಯಾಪಿ ದಂಗೆಯಾಗಿ ಮಾರ್ಪಡಿಸಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಸ್ಕ್ರೀನ್ನಿಂದ ರಸ್ತೆಗೆ ಇಳಿದ ‘ಡಿಜಿಟಲ್ ವಾರಿಯರ್ಸ್’
ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚೇತನ್ ಭಗತ್, ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಹಲವು ತಿಂಗಳುಗಳಿಂದ ಆಕ್ರೋಶ ಕುದಿಯುತ್ತಿತ್ತು. ಆದರೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗದ ವೀಡಿಯೊಗಳು ಹೊರಬಿದ್ದಿದ್ದೇ ಈ ಹೋರಾಟದ ದಿಕ್ಸೂಚಿಯನ್ನು ಬದಲಾಯಿಸಿತು ಎಂದಿದ್ದಾರೆ.
“ಇಂದಿನ ಯುವ ಪೀಳಿಗೆ ಕೇವಲ ಮೊಬೈಲ್ ಸ್ಕ್ರೀನ್ಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಅವರು ರಸ್ತೆಗಿಳಿದು ಹೋರಾಟ ಮಾಡುವುದಿಲ್ಲ ಎಂಬ ದೊಡ್ಡ ತಪ್ಪು ಕಲ್ಪನೆ ಎಲ್ಲರಲ್ಲೂ ಇತ್ತು. ಆದರೆ ಈ ಬಾರಿ ‘ಡಿಜಿಟಲ್ ವಾರಿಯರ್ಸ್’ ಎನಿಸಿಕೊಂಡಿದ್ದ ಯುವಕರು ಬೀದಿಗಿಳಿದು ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಪೊಲೀಸರು ಯುವಕರ ಮೇಲೆ ನಡೆಸಿದ ಲಾಠಿಚಾರ್ಜ್ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಭಾವನಾತ್ಮಕ ಅಲೆಯನ್ನು ಸೃಷ್ಟಿಸಿದವು,” ಎಂದು ಭಗತ್ ವಿವರಿಸಿದ್ದಾರೆ.
ಇನ್ಸ್ಟಾಗ್ರಾಮ್ ಎಂಬ ಹೋರಾಟದ ಅಸ್ತ್ರ
ಎಕ್ಸ್ (X) ನಂತಹ ಇತರ ಸಾಮಾಜಿಕ ಜಾಲತಾಣಗಳಿಗಿಂತ ಇನ್ಸ್ಟಾಗ್ರಾಮ್ ರೀಲ್ಸ್ಗಳು ಅತ್ಯಂತ ವೇಗವಾಗಿ ಪ್ರಭಾವ ಬೀರಲಿವೆ ಎಂದಿರುವ ಅವರು, “ಸಣ್ಣ ಮತ್ತು ಭಾವನಾತ್ಮಕ ವಿಡಿಯೋಗಳನ್ನು ತಕ್ಷಣವೇ ಲಕ್ಷಾಂತರ ಜನರಿಗೆ ತಲುಪಿಸುವ ಶಕ್ತಿ ಇನ್ಸ್ಟಾಗ್ರಾಮ್ಗಿದೆ. ನ್ಯಾಯೋಚಿತ ಪರೀಕ್ಷೆಗಾಗಿ ಆಗ್ರಹಿಸುತ್ತಿದ್ದ ಹದಿಹರೆಯದ ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ ದೃಶ್ಯಗಳು ಜಾಲತಾಣಗಳಲ್ಲಿ ತೀವ್ರವಾಗಿ ಸದ್ದು ಮಾಡಿದವು,” ಎಂದು ಹೇಳಿದ್ದಾರೆ.
2011ರ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹೋಲಿಸಿದ ಭಗತ್, “ಆ ಕಾಲಕ್ಕೆ ಹೋಲಿಸಿದರೆ ಇಂದು ಅಗ್ಗದ ಇಂಟರ್ನೆಟ್ ಮತ್ತು ಕ್ಷಣಾರ್ಧದಲ್ಲಿ ವೀಡಿಯೊ ತಲುಪಿಸುವ ತಂತ್ರಜ್ಞಾನವಿದೆ. ಹೀಗಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಗಳು ತಕ್ಷಣವೇ ಸ್ಪಂದಿಸಬೇಕಾಗುತ್ತದೆ. ವಿಳಂಬ ಮಾಡಿದಷ್ಟೂ ಹೋರಾಟದ ಕಾವು ಹೆಚ್ಚಾಗುತ್ತಲೇ ಹೋಗುತ್ತದೆ,” ಎಂದು ಎಚ್ಚರಿಸಿದ್ದಾರೆ.
ಯುವ ಪೀಳಿಗೆಯ ಧೈರ್ಯಕ್ಕೆ ಮೆಚ್ಚುಗೆ
ಹೋರಾಟ ನಿರತ ಯುವಜನರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಚೇತನ್ ಭಗತ್, “ನಿಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಿಮ್ಮ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು. ನೀವು ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ. ನಮ್ಮ ಯುವಕಾಲದ ಕಿಚ್ಚು ನಿಮ್ಮಲ್ಲೂ ಇರುವುದು ನೋಡಿ ಸಂತಸವಾಗುತ್ತಿದೆ,” ಎಂದು ಹೇಳುವ ಮೂಲಕ ಜೆನ್ ಝೀ ಪೀಳಿಗೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆದೇಶವಲ್ಲ, ಒಮ್ಮತ ಅಗತ್ಯ.. ಯುವಕರಿಗೆ ಮಾತುಕತೆ ಬೇಕೇ ಹೊರತು ಆಜ್ಞೆಯಲ್ಲ : ಮೋಹನ್ ಭಾಗವತ್



















