ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 18 ಮಹಡಿ ಬಹುಮಹಡಿ ಕಟ್ಟಡವೊಂದು ಭೀತಿ ಹುಟ್ಟಿಸಿದ್ದು, ಅದನ್ನು ಹಂತ ಹಂತವಾಗಿ ನೆಲಸಮಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಿದ್ಧತೆ ನಡೆಸಿದೆ.

ಖಾಸಗಿ ಸಂಸ್ಥೆಯ ಒಡೆತನದ ಬೆಂಗಳೂರು ದಕ್ಷಿಣ ನಗರಪಾಲಿಕೆ ವ್ಯಾಪ್ತಿಯ ಕುಡ್ಲು ಬಳಿ ಇರುವ ಸುಮಾರು 18 ಬಹುಮಹಡಿಯ ಈ ಕಟ್ಟಡದಲ್ಲಿ ಸ್ಟ್ರಕ್ಚರಲ್ ಡ್ಯಾಮೇಜ್ ಕಂಡುಬಂದಿದ್ದು, ಕಟ್ಟಡ ಒಂದು ಬದಿಗೆ ವಾಲಿರುವುದು ತಾಂತ್ರಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಭವಿಷ್ಯದಲ್ಲಿ ಯಾವುದೇ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಮನಗಂಡು ಕಟ್ಟಡವನ್ನು ಡೆಮಾಲಿಷನ್ ಮಾಡಲು ಜಿಬಿಎ ನಿರ್ಧರಿಸಿದೆ.

ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರು ಹಾಗೂ ಕಟ್ಟಡ ಮಾಲೀಕರ ನಡುವೆ ಸಭೆ ನಡೆದಿದ್ದು, ಕಟ್ಟಡವನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಜಿಬಿಎ ಸೂಚನೆಯನ್ನು ಮಾಲೀಕರು ಒಪ್ಪಿಕೊಂಡಿದ್ದು, ಸ್ವತಃ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಇದೇ ಕಟ್ಟಡಕ್ಕೆ ಈ ಹಿಂದೆ ಜಿಬಿಎ ವತಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ನೀಡಲಾಗಿತ್ತು. ಆದರೆ ಈಗ ಕಟ್ಟಡದಲ್ಲಿ ಗಂಭೀರ ರಚನಾತ್ಮಕ ಸಮಸ್ಯೆಗಳು ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಟ್ಟಡ ನಿರ್ಮಾಣಕ್ಕೂ ಮುನ್ನ ಅಗತ್ಯವಿರುವ ಮಣ್ಣಿನ ಸ್ಥಿರತೆ (Soil Stability) ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಒಸಿ ನೀಡುವ ವೇಳೆಯೂ ಸಂಬಂಧಪಟ್ಟ ಇಂಜಿನಿಯರ್‌ಗಳು ತಾಂತ್ರಿಕ ಅಂಶಗಳನ್ನು ಸಮರ್ಪಕವಾಗಿ ಪರಿಶೀಲಿಸದೇ ಅನುಮೋದನೆ ನೀಡಿರುವ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಜಿಬಿಎ ಇಂಜಿನಿಯರ್‌ಗಳು ಕಟ್ಟಡವನ್ನು ಹಂತ ಹಂತವಾಗಿ ಮೇಲಿನ ಮಹಡಿಯಿಂದ ಕೆಳಕ್ಕೆ ಡೆಮಾಲಿಷನ್ ಮಾಡುವಂತೆ ಸೂಚಿಸಿದ್ದು, ಮುಂದಿನ ವಾರದಿಂದ ತೆರವು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.
ಇನ್ನೂ ಕಟ್ಟಡ ತೆರವು ವೇಳೆ ಯಾವುದೇ ಅನಾಹುತ ತಡೆಯಲು ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಜಿಬಿಎ ಮುಂದಾಗಿದೆ. ಈ ಬೆಳವಣಿಗೆ ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಸುರಕ್ಷತೆ ಹಾಗೂ ನಿರ್ಮಾಣ ಗುಣಮಟ್ಟದ ಮೇಲ್ವಿಚಾರಣೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ – 80 ಲಕ್ಷಕ್ಕೆ ಮಾರಾಟವಾಯ್ತಾ ಪಶು ವೈದ್ಯಾಧಿಕಾರಿ ಹುದ್ದೆ?



















