ಬೆಂಗಳೂರು : ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ.
ಈ ಹೋರಾಟ ಕೇವಲ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರ ಗಮನ ಸೆಳೆಯುವುದರ ಜೊತೆಗೆ, ಭಾರತೀಯ ಕ್ರಿಕೆಟರ್‌ಗಳ ಪತ್ನಿಯರಾದ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇ, ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರ ಗಮನವನ್ನೂ ಸೆಳೆದಿದೆ. ಶಿಕ್ಷಣ ಸುಧಾರಣೆ ಹಾಗೂ ಹೊಣೆಗಾರಿಕೆಗಾಗಿ ನಡೆಯುತ್ತಿರುವ ಈ ಹೋರಾಟ ಮತ್ತು ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಈ ಸೆಲೆಬ್ರಿಟಿಗಳು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಟ್ರೆಂಡ್ ಆದ ಜಂತರ್ ಮಂತರ್ ಪ್ರತಿಭಟನೆ
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ಆಗ್ರಹಿಸಿ CJP ನೇತೃತ್ವದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದರು. ಆದರೆ, ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿತು. ಗುಂಪು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಈ ವಿಚಾರವು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸೆಲೆಬ್ರಿಟಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ಈ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ದೆಹಲಿಗೆ ಸಂಬಂಧಿಸಿದ ನ್ಯೂಸ್ ಹಾಗೂ CJP ಪ್ರತಿಭಟನೆಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿವೆ.
ರಿತಿಕಾ ಸಜ್ದೇ ಹಂಚಿಕೊಂಡ ವಿಡಿಯೋ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇ ಅವರು ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿರುವ 9 ವರ್ಷದ ಬಾಲಕನೊಬ್ಬನ ಸಂದರ್ಶನದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಾಲಕನು, “ಲಾಠಿಗಳಿಗೆ ಹೆದರುವುದಿಲ್ಲ, ಭಗತ್ ಸಿಂಗ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ” ಎಂದು ಧೈರ್ಯವಾಗಿ ಮಾತನಾಡಿದ್ದಾನೆ. ರಿತಿಕಾ ಅವರು ಈ ವಿಡಿಯೋಗೆ ಯಾವುದೇ ವೈಯಕ್ತಿಕ ಕಾಮೆಂಟ್ ಸೇರಿಸಿಲ್ಲವಾದರೂ, ದಿಟ್ಟತನದಿಂದ ನಿಂತಿರುವ ಬಾಲಕನ ವಿಡಿಯೋವನ್ನು ಕೇವಲ ರಿಪೋಸ್ಟ್ ಮಾಡಿದ್ದಾರೆ.
ಹಿಂಸಾಚಾರವು ಪ್ರಜಾಪ್ರಭುತ್ವವಲ್ಲ ಎಂದ ದೇವಿಶಾ ಶೆಟ್ಟಿ
ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಈ ವಿಚಾರವಾಗಿ ಕೊಂಚ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, “ಹಿಂಸಾಚಾರವು ಪ್ರಜಾಪ್ರಭುತ್ವವಲ್ಲ (Violence isn’t democracy)” ಎಂದು ತಲೆಬರಹ ನೀಡಿದ್ದಾರೆ. ಕಲ್ಲು ತೂರುವುದು, ಪೊಲೀಸರ ಮೇಲೆ ದಾಳಿ ಮಾಡುವುದು, ಬ್ಯಾರಿಕೇಡ್‌ಗಳನ್ನು ಮುರಿಯುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಶಾಂತಿಯುತ ಪ್ರತಿಭಟನೆಯಾಗಲು ಸಾಧ್ಯವಿಲ್ಲ, ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ದೇವಿಶಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕಣ್ಣೀರು ತರಿಸುವ ಅನಿಲ ಪ್ರಯೋಗಕ್ಕೆ ಸಂಜನಾ ಗಣೇಶನ್ ಆತಂಕ
ಖ್ಯಾತ ಕ್ರೀಡಾ ನಿರೂಪಕಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಪ್ರತಿಭಟನಾ ಸ್ಥಳದಲ್ಲಿ ನಡೆದ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದ 6 ವರ್ಷದ ಮಗುವಿಗೂ ಟಿಯರ್ ಗ್ಯಾಸ್ (ಅಶ್ರುವಾಯು) ತಗುಲಿದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, “ಪ್ರತಿಭಟನೆಯಿಂದ ದೂರ ಕುಳಿತಿದ್ದ 6 ವರ್ಷದ ಮಗುವಿಗೆ ಇದು ಸಂಭವಿಸಬಹುದಾದರೆ, ಅದು ಯಾರಿಗಾದರೂ ಸಂಭವಿಸಬಹುದು. ಮಕ್ಕಳು ಕಣ್ಣೀರು ತರಿಸುವ ಅನಿಲಕ್ಕೆ ಉಸಿರುಗಟ್ಟಿ ಒದ್ದಾಡುವುದನ್ನು ಯಾವುದೇ ಪ್ರಜಾಪ್ರಭುತ್ವ ಸಾಮಾನ್ಯವೆಂದು ಪರಿಗಣಿಸಬಾರದು. ರಕ್ಷಣೆ ಮಾಡಬೇಕಾದವರಿಂದಲೇ ಶಾಂತಿಯುತ ನಾಗರಿಕರು ಭಯಪಡಬಾರದು” ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆನ್‌ಲೈನ್ ಚರ್ಚೆಯ ಕೇಂದ್ರ ಬಿಂದು
ಕ್ರಿಕೆಟಿಗರ ಪತ್ನಿಯರ ಈ ಭಿನ್ನ ನಿಲುವುಗಳು ಹಾಗೂ ಪೋಸ್ಟ್‌ಗಳು X (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿವೆ. ರಾಜಕೀಯ ವಲಯವನ್ನೂ ಮೀರಿ ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ಈ ವಿದ್ಯಮಾನದ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಪ್ರತಿಯೊಬ್ಬರ ಪೋಸ್ಟ್‌ಗಳು ಬೇರೆ ಬೇರೆ ದೃಷ್ಟಿಕೋನವನ್ನು ಹೊಂದಿದ್ದರೂ, ಈ ಎಲ್ಲಾ ಚರ್ಚೆಗಳು ದೆಹಲಿಯ CJP ಪ್ರತಿಭಟನೆಯ ಸುತ್ತಲೇ ಗಿರಕಿ ಹೊಡೆಯುತ್ತಿವೆ.
ಇದನ್ನೂ ಓದಿ : ಪಾನಮತ್ತರಾಗಿ ವಾಹನ ಚಾಲಯಿಸಿ ಸಿಕ್ಕಿಬಿದ್ದ ಡೇವಿಡ್ ವಾರ್ನರ್ : ತಪ್ಪೊಪ್ಪಿಕೊಂಡ ಆಸೀಸ್ ತಾರೆಗೆ ಜೈಲು ಶಿಕ್ಷೆ!



















