ಬೆಂಗಳೂರು : ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ನಿನ್ನೆ (ಜುಲೈ 18) ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಸದ್ಯ ಪದ್ಮನಾಭನಗರದ ನಿವಾಸದಲಿ ಮೃತದೇಹ ಇರಿಸಲಾಗಿದ್ದು, ಇಂದು ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಚೆನ್ನಮ್ಮನ ಪಾರ್ಥಿವ ಶರೀರವನ್ನು ಹೊಳೆನರಸೀಪುರಕ್ಕೆ ಕೊಂಡೊಯ್ಯಲಾಗುತ್ತದೆ.
ಪಾರ್ಥಿವ ಶರೀರವು ನೆಲಮಂಗಲ, ಕುಣಿಗಲ್, ಬೆಳ್ಳೂರು ಕ್ರಾಸ್, ಚನ್ನರಾಯಪಟ್ಟಣ, ಹಾಸನ ಡೈರಿ ಸರ್ಕಲ್, ಎನ್.ಆರ್. ಸರ್ಕಲ್ ಹಾಗೂ ಮೊಸಳೆ ಹೊಸಹಳ್ಳಿ ಮಾರ್ಗವಾಗಿ ಹೊಳೆನರಸೀಪುರ ತಲುಪಲಿದೆ. ಮಾರ್ಗ ಮಧ್ಯೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇಂದು ರಾತ್ರಿ ಹೊಳೆನರಸೀಪುರದಲ್ಲಿರುವ ಹೆಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ 9.30 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ.
ಬಳಿಕ ನಾಳೆ ಮಧ್ಯಾಹ್ನ 2ರಿಂದ ಸಂಜೆ 4.15ರ ನಡುವಿನ ವೇಳೆಯಲ್ಲಿ ಚೆನ್ನಮ್ಮ ಅವರ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಹೊಳೆನರಸೀಪುರದ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ : ನಾಪತ್ತೆಯಾಗಿದ್ದ ಗುತ್ತಿಗೆ ಸರ್ವೇಯರ್ ಶವವಾಗಿ ಪತ್ತೆ!



















