ಮುಂಬೈ : ಇತ್ತೀಚೆಗಷ್ಟೇ ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿರುವ ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಅವರು ತಮ್ಮ ಮೇಲಿನ ‘ಲವ್ ಜಿಹಾದ್’ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮ್ಮ ಯಾವುದೇ ಅಂತರ್ ಧರ್ಮೀಯ ವಿವಾಹಗಳಲ್ಲಿ ಮತಾಂತರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು “ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್” ಎಂದು ಕೆಲವರು ಬಿಂಬಿಸುತ್ತಿದ್ದು, ಅಂಥವವ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ತಮ್ಮ ಕುಟುಂಬವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಮತ್ತು ಅಂತರ್ ಧರ್ಮೀಯ ಸಂಬಂಧಗಳನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಸುದೀರ್ಘವಾಗಿ ಮಾತನಾಡಿರುವ ಅಮೀರ್ ಖಾನ್, “ನಮ್ಮದು ಅತ್ಯಂತ ಅಂತರ್ಗತವಾದ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ವಿವಾಹವಾಗಿದ್ದಾರೆ, ನನ್ನ ಮಗಳು ಕೂಡ ಹಿಂದೂ ಯುವಕನನ್ನೇ ವರಿಸಿದ್ದಾಳೆ. ನನ್ನ ಸೋದರಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾರೆ. ಇವೆಲ್ಲವೂ ನಾಗರಿಕ ವಿವಾಹಗಳಾಗಿದ್ದು (Civil Marriages), ಇಲ್ಲಿ ಮತಾಂತರದ ಪ್ರಶ್ನೆಯೇ ಬಂದಿಲ್ಲ,” ಎಂದು ವಿವರಿಸಿದ್ದಾರೆ. ಜೊತೆಗೆ “ನನ್ನ ಮಾಜಿ ಪತ್ನಿಯರಾದ ರೀನಾ ದತ್ತಾ ಆಗಲಿ, ಕಿರಣ್ ರಾವ್ ಆಗಲಿ ಅಥವಾ ಈಗಿನ ಪತ್ನಿ ಗೌರಿ ಆಗಲಿ ಯಾರೂ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ಗೌರಿ ಹಿಂದೂ ಕೂಡ ಅಲ್ಲ, ಆಕೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವಳು. ದಿನಗಳು ಕಳೆದಂತೆ ಜೀವನ ಹೆಚ್ಚು ಹಾಸ್ಯಾಸ್ಪದವಾಗುತ್ತಿದೆ,” ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಅಮೀರ್ – ಗೌರಿ ಆಪ್ತ ವಿವಾಹ
61 ವರ್ಷದ ಅಮೀರ್ ಖಾನ್ ಹಾಗೂ ಗೌರಿ ಸ್ಪ್ರ್ಯಾಟ್ ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರೂ, ಎರಡು ವರ್ಷಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಮೀರ್ ಸೋದರಸಂಬಂಧಿ ನುಜಹತ್ ಖಾನ್ ಮೂಲಕ ಇವರ ಸಂಪರ್ಕ ಮತ್ತೆ ಬೆಳೆದಿತ್ತು. ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ತಮ್ಮ 60ನೇ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಅಮೀರ್ ಅವರು ಗೌರಿಯನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ನಡೆಸಿದ ಈ ಜೋಡಿ, ಜುಲೈ 5 ರಂದು ಮುಂಬೈನ ಅಮೀರ್ ನಿವಾಸದಲ್ಲಿ ಅತ್ಯಂತ ಸರಳ ಹಾಗೂ ಆಪ್ತ ವಲಯದ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿತ್ತು.
ಈ ಆಪ್ತ ವಿವಾಹ ಮಹೋತ್ಸವದಲ್ಲಿ ಅಮೀರ್ ಖಾನ್ ಅವರ ಮಕ್ಕಳಾದ ಜುನೈದ್ ಖಾನ್, ಇರಾ ಖಾನ್ ಮತ್ತು ಅಳಿಯ ನೂಪುರ್ ಶಿಖರೆ ಸೇರಿದಂತೆ ಕೇವಲ 150 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು. ಚಿತ್ರರಂಗದ ಆಪ್ತರಷ್ಟೇ ಅಲ್ಲದೆ ಉದ್ಯಮಿ ಮುಕೇಶ್ ಅಂಬಾನಿ, ರಾಜಕಾರಣಿ ರಾಜ್ ಠಾಕ್ರೆ, ಚಲನಚಿತ್ರ ನಿರ್ದೇಶಕ ಅಶುತೋಷ್ ಗೋವಾರಿಕರ್, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಹಾಸ್ಯನಟ ವೀರ್ ದಾಸ್ ಸೇರಿದಂತೆ ಹಲವು ಗಣ್ಯರು ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಅಮೀರ್ ಖಾನ್ ಅವರು ಈ ಹಿಂದೆ ರೀನಾ ದತ್ತಾ (1986-2002) ಹಾಗೂ ಕಿರಣ್ ರಾವ್ (2005-2021) ಅವರನ್ನು ವಿವಾಹವಾಗಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ : ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಕೇಸ್ – 165 ಕೋಟಿ ರೂ. ನಾಮ ಹಾಕಿ ಖದೀಮರು ದುಬೈಗೆ ಪರಾರಿ!



















