ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟಿಳಕವಾಡಿ ಪ್ರದೇಶದಲ್ಲಿ ಅಪೆಕ್ಸ್ ಬಿಜ್ ಕಾರ್ಪ್ LLP ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದ ಕಾಶಿನಾಥ್ ವಾಗ್ಮೋರೆ ಹಾಗೂ ಗಣೇಶ್ ಬಂಡಾರಿ, ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ದುಬೈಗೆ ಪರಾರಿಯಾಗಿದ್ದಾರೆ.

ವಂಚಕರು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ ₹4 ಸಾವಿರ ಬಡ್ಡಿ ನೀಡುವುದಾಗಿ ಹಾಗೂ ಒಂದು ವರ್ಷದ ಬಳಿಕ ಮೂಲ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿ ಹೂಡಿಕೆದಾರರನ್ನು ಸೆಳೆದಿದ್ದರು. ಇದೇ ರೀತಿಯಲ್ಲಿ ಹಲವು ವರ್ಷಗಳಿಂದ ಜನರಿಂದ ಹಣ ಸಂಗ್ರಹಿಸಿ, 3,500ಕ್ಕೂ ಹೆಚ್ಚು ಹೂಡಿಕೆದಾರರಿಂದ ಸುಮಾರು ₹165 ಕೋಟಿ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.
ಇದೀಗ ಕಚೇರಿಗೆ ಬೀಗ ಜಡಿದು ಹೂಡಿಕೆದಾರರ ಸಂಪರ್ಕಕ್ಕೂ ಸಿಗದೇ ಆರೋಪಿಗಳು ದುಬೈಗೆ ಪರಾರಿಯಾಗಿದ್ದಾರೆ ತಿಳಿದುಬಂದಿದೆ. ಈ ಹಿನ್ನೆಲೆ ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಹೂಡಿಕೆದಾರರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಹೂಡಿಕೆದಾರರ ದೂರಿನ ಮೇರೆಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಉಪನ್ಯಾಸಕನ ವಿರುದ್ಧ ಸಿಡಿದೆದ್ದ ಪೋಷಕರು!



















