ಬರ್ಮಿಂಗ್‌ಹ್ಯಾಮ್ : ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಮಂಗಳವಾರ (ಜುಲೈ 14, 2026) ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅದ್ಭುತ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅವರನ್ನು ಕೇವಲ ಒಂದು ರನ್‌ಗೆ ಔಟ್ ಮಾಡುವ ಮೂಲಕ ಟೀಮ್ ಇಂಡಿಯಾಕ್ಕೆ ಮಹತ್ವದ ಬ್ರೇಕ್‌ಥ್ರೂ ಒದಗಿಸಿದ್ದಲ್ಲದೆ, ತಮ್ಮ ಏಕದಿನ ವೃತ್ತಿಜೀವನದಲ್ಲಿ 150 ವಿಕೆಟ್‌ಗಳ ಗಡಿಯನ್ನು ದಾಟಿದ್ದಾರೆ. ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಅವರ ವಿಕೆಟ್ ಪತನದ ಬಳಿಕ 13ನೇ ಓವರ್‌ನಲ್ಲಿ ನಾಯಕ ಶುಭ್‌ಮನ್ ಗಿಲ್ ಅವರಿಂದ ಚೆಂಡು ಪಡೆದ ಬುಮ್ರಾ, ಎದುರಾಳಿ ಪಾಳೆಯದಲ್ಲಿ ನಡುಕ ಹುಟ್ಟಿಸಿದರು.
ಬುಮ್ರಾ ಕಟರ್‌ಗೆ ತಬ್ಬಿಬ್ಬಾದ ಹ್ಯಾರಿ ಬ್ರೂಕ್
ಅಪಾಯಕಾರಿ ಬ್ಯಾಟರ್ ಆಗಿರುವ ಹ್ಯಾರಿ ಬ್ರೂಕ್‌ಗೆ ಬುಮ್ರಾ ಎಸೆದ ಅದ್ಭುತ ಕಟರ್ ಊಹೆಗಿಂತ ತುಸು ಹೆಚ್ಚು ಬೌನ್ಸ್ ಆಯಿತು. ಇದನ್ನು ಅರಿಯುವಲ್ಲಿ ವಿಫಲರಾದ ಬ್ರೂಕ್, ಆ ಎಸೆತವನ್ನು ಡಿಫೆಂಡ್ ಮಾಡಲು ಮುಂದಾಗಿ ಬ್ಯಾಟ್‌ನ ಮೇಲ್ಭಾಗವನ್ನು ತಾಕಿಸಿದರು. ಪರಿಣಾಮ, ಚೆಂಡು ಸ್ಲಿಪ್‌ನಲ್ಲಿದ್ದ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಕೈಸೇರಿತು. ಈ ಆಕರ್ಷಕ ಕ್ಯಾಚ್‌ನೊಂದಿಗೆ ಹ್ಯಾರಿ ಬ್ರೂಕ್ ಕೇವಲ 3 ಎಸೆತಗಳಲ್ಲಿ 1 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಏಕದಿನ ಕ್ರಿಕೆಟ್‌ಗೆ ಮರಳಿದ ಬೆನ್ನಲ್ಲೇ, ಬುಮ್ರಾ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದರು.
ವಿಕೇಟ್ ಬೇಟೆಯಲ್ಲಿ ಬುಮ್ರಾ ಡಬಲ್ ಧಮಾಕಾ
ಹ್ಯಾರಿ ಬ್ರೂಕ್ ಅವರ ವಿಕೆಟ್ ಬುಮ್ರಾ ಪಾಲಿಗೆ ಹಲವು ದಾಖಲೆಗಳನ್ನು ತಂದುಕೊಟ್ಟಿದೆ. ಈ ವಿಕೆಟ್‌ನೊಂದಿಗೆ ಏಕದಿನ ಮಾದರಿಯಲ್ಲಿ 150 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಇಂಗ್ಲೆಂಡ್ ನೆಲದಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ನೂತನ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈವರೆಗೆ ಬುಮ್ರಾ ಇಂಗ್ಲೆಂಡ್‌ನಲ್ಲಿ 31 ವಿಕೆಟ್ ಪಡೆದಿದ್ದು, ಈ ಪಟ್ಟಿಯಲ್ಲಿ ರವೀಂದ್ರ ಜಡೇಜಾ (30 ವಿಕೆಟ್) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇವರ ನಂತರದ ಸ್ಥಾನಗಳಲ್ಲಿ ಭುವನೇಶ್ವರ್ ಕುಮಾರ್ (28), ಮದನ್ ಲಾಲ್ (27) ಮತ್ತು ಮೊಹಮ್ಮದ್ ಶಮಿ (26) ಇದ್ದಾರೆ. ಜಾಗತಿಕ ಮಟ್ಟದಲ್ಲೂ ಬುಮ್ರಾ ಅಪರೂಪದ ಸಾಧನೆ ಮಾಡಿದ್ದು, ಟೆಸ್ಟ್‌ನಲ್ಲಿ 200+, ಏಕದಿನದಲ್ಲಿ 150+ ಮತ್ತು ಟಿ20ಯಲ್ಲಿ 100+ ವಿಕೆಟ್ ಪಡೆದ ಶಕೀಬ್ ಅಲ್ ಹಸನ್ ಮತ್ತು ಟಿಮ್ ಸೌಥಿ ಅವರ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ವಿಶ್ವದ ಶ್ರೇಷ್ಠ ಆಲ್-ಫಾರ್ಮ್ಯಾಟ್ ಬೌಲರ್ ಎಂದ ಡಕೆಟ್
ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಕೊಂಡಾಡಿದ್ದರು. “ನಾವು ಬುಮ್ರಾ ಅವರನ್ನು ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಅವರು ವಿಶ್ವದ ಅತ್ಯುತ್ತಮ ಆಲ್-ಫಾರ್ಮ್ಯಾಟ್ ಬೌಲರ್. ನಾನು ಈಗಾಗಲೇ 10 ಟೆಸ್ಟ್ ಪಂದ್ಯಗಳಲ್ಲಿ ಅವರನ್ನು ಎದುರಿಸಿದ್ದೇನೆ. ಭಾರತ ಅವರನ್ನು ವಿಕೆಟ್ ಪಡೆಯುವ ಅಸ್ತ್ರವಾಗಿ ಎಲ್ಲಾ ಸಮಯದಲ್ಲೂ ಬಳಸಿಕೊಳ್ಳುತ್ತದೆ.
ಅದಕ್ಕೆ ತಕ್ಕಂತೆ ನಾವು ಎಚ್ಚರಿಕೆ ವಹಿಸಬೇಕಿದೆ” ಎಂದು ಡಕೆಟ್ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ನಿಜ ಮಾಡುವಂತೆ, ಬುಮ್ರಾ ತಮ್ಮ ನಿಖರ ದಾಳಿಯ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ತಂಡ ಕಳೆದ 7 ಏಕದಿನ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ದಾಖಲೆ ಹೊಂದಿದ್ದರೂ, 2014ರಲ್ಲಿ ಈ ಮೈದಾನದಲ್ಲಿ ಇಂಗ್ಲೆಂಡ್ ಅನ್ನು ಮಣಿಸಿದ ಕೊನೆಯ ತಂಡ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಇದೀಗ ಬುಮ್ರಾ ಮತ್ತು ಇತರ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನವು ಭಾರತದ ಗೆಲುವಿನ ಆಸೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ : ಎಡ್ಜ್‌ಬಾಸ್ಟನ್ ಅಂಗಳದಲ್ಲಿ ‘ಕ್ಯಾಪ್ಟನ್ ಕೂಲ್’ ದರ್ಶನ : ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಮನ ಸೆಳೆದ ಧೋನಿ!



















