ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರು ಈಗ ಪೊಲೀಸ್ ಅಧಿಕಾರಿಗಳ ಹೆಸರನ್ನೇ ದುರುಪಯೋಗಪಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ DCP ಎಂ. ನಾರಾಯಣ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಕಡಿಮೆ ದರದಲ್ಲಿ ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿ ಜನರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್‌ಗಳನ್ನು ನಂಬಿದ ಹಲವರು ವಸ್ತು ಖರೀದಿಸಲು ಮುಂದಾಗಿದ್ದಾರೆ. ಬಳಿಕ ಯುಪಿಐ ಮೂಲಕ ಮುಂಗಡ ಹಣ ಪಡೆದು ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ. ಕಳೆದ ಎರಡು-ಮೂರು ದಿನಗಳಲ್ಲಿ ಸುಮಾರು ಏಳು ಮಂದಿ ಈ ವಂಚನೆಗೆ ಬಲಿಯಾಗಿದ್ದು, ಒಬ್ಬೊಬ್ಬರಿಂದ 20 ಸಾವಿರದಿಂದ 30 ಸಾವಿರ ರೂಪಾಯಿವರೆಗೆ ಹಣ ಪಡೆದು ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಣ ಕಳೆದುಕೊಂಡವರ ಮಾಹಿತಿ ಡಿಸಿಪಿ ಎಂ. ನಾರಾಯಣ್ ಅವರ ಸ್ನೇಹಿತರ ಮೂಲಕ ಅವರಿಗೆ ತಲುಪಿದ ಬಳಿಕ ಈ ವಂಚನೆ ಬೆಳಕಿಗೆ ಬಂದಿದೆ. ವಿಚಾರಿಸಿದಾಗ ತಮ್ಮ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ವಂಚನೆ ನಡೆಸುತ್ತಿರುವುದು ಗೊತ್ತಾಗಿದೆ. ಈ ಸಂಬಂಧ ಮೇ ತಿಂಗಳಲ್ಲೇ ಪ್ರಕರಣ ದಾಖಲಾಗಿದ್ದರೂ, ನಕಲಿ ಖಾತೆಯ ಮೂಲಕ ವಂಚಕರು ಪೋಸ್ಟ್‌ಗಳನ್ನು ಮುಂದುವರಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಅರಿತ ಡಿಸಿಪಿ ಎಂ. ನಾರಾಯಣ್ ಅವರು ಸ್ವತಃ ವಿಡಿಯೋ ಮಾಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ನಂಬಬಾರದು, ಹಣ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ನಡೆಸಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪುತ್ರಿಗೆ ನೋಟಿಸ್!



















