ಉಡುಪಿ : ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಅತ್ಯುನ್ನತ ಸ್ಥಾನವಿದ್ದು, ಗೋವು ಕೇವಲ ಒಂದು ಪ್ರಾಣಿಯಲ್ಲ, ರಾಷ್ಟ್ರದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಬದುಕಿನ ಪ್ರತೀಕವಾಗಿದೆ. ಗೋಮಾತೆಗೆ ರಾಷ್ಟ್ರೀಯ ಮಾತೆ ಸ್ಥಾನಮಾನ ನೀಡಬೇಕು, ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಗೋಸೇವೆಗಾಗಿ ಕೇಂದ್ರ ಸರ್ಕಾರ ವಿಶೇಷ ಕಾನೂನು ರೂಪಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು “ಗೋಮಾತೆಯ ಗೌರವ ಅಭಿಯಾನ” ಆರಂಭಿಸಲಾಗಿದೆ. ದೇಶದಾದ್ಯಂತ ಗೋಭಕ್ತರು, ಗೋ ರಕ್ಷಕರು, ಗೋಸೇವಾ ಸಂಸ್ಥೆಗಳು ಹಾಗೂ ಹಿಂದೂ ಸಮಾಜದ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಈ ಅಭಿಯಾನ ನಡೆಯುತ್ತಿದೆ.
ಈ ಅಭಿಯಾನ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧದ ಹೋರಾಟವಲ್ಲ. ಗೋಮಾತೆಯ ರಕ್ಷಣೆ, ಗೌರವ ಮತ್ತು ಸಂರಕ್ಷಣೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿಯಾನಕ್ಕೆ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ನೇತೃತ್ವವಿದ್ದು, ಬೈಂದೂರಿನ ಗಜೇಂದ್ರ ಎಸ್. ಬೇಲೆಮನೆ ಹಾಗೂ ನಾಗರಾಜ್ ಪೂಜಾರಿ ಅವರಿಗೆ ಮೂರು ಜಿಲ್ಲೆಗಳ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ.

ಈ ಹೋರಾಟವನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಈ ಅಭಿಯಾನ ಯಶಸ್ವಿಯಾಗಿ ನಡೆದಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲಾಗಿದೆ. ಇದೀಗ ಎರಡನೇ ಹಂತದ ಹೋರಾಟ ನಡೆಯುತ್ತಿದ್ದು, ಇದೇ ಜುಲೈ 27ರಂದು ಜಿಲ್ಲೆಯ ಏಳು ತಾಲೂಕುಗಳ ಗೋಪ್ರೇಮಿಗಳು, ಗೋ ರಕ್ಷಕರು, ಗೋಭಕ್ತರು ಹಾಗೂ ಹಿಂದೂ ಸಮಾಜದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.
ಇದರ ಬಳಿಕ ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ನಡೆಯಲಿದ್ದು, 2027ರ ಜನವರಿಯಲ್ಲಿ ರಾಷ್ಟ್ರಮಟ್ಟದ ಮಹಾ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಈ ಹೋರಾಟಕ್ಕೂ ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ, ದೇಶದ 108 ಮಂದಿ ಸಾಧು-ಸಂತರು ಹಾಗೂ ಗೋಭಕ್ತರು 2027ರ ಏಪ್ರಿಲ್‌ನಲ್ಲಿ ಗೋಮಾತೆಯ ಉಳಿವು ಮತ್ತು ಅಸ್ತಿತ್ವಕ್ಕಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಈ 108 ಮಂದಿ ಸಾಧು-ಸಂತರಲ್ಲಿ ಜಿಲ್ಲೆಯ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರೂ ಒಬ್ಬರಾಗಿದ್ದಾರೆ.
ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು, ಹಸುವಿಗೆ ರಾಷ್ಟ್ರೀಯ ಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪೂಜ್ಯ ಸ್ಥಾನ ಹಾಗೂ ರಾಷ್ಟ್ರೀಯ ಪರಂಪರೆಯ ಗೌರವ ನೀಡುವುದು, ಗೋಸೇವೆಗಾಗಿ ಕೇಂದ್ರ ಕಾನೂನು ಜಾರಿಗೊಳಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದು, ಗೋಚಾರ ಭೂಮಿಯನ್ನು ರಕ್ಷಿಸುವುದು, ಮೇವು ಭದ್ರತಾ ನೀತಿ ಜಾರಿಗೊಳಿಸುವುದು, ಗೋ ಆಧಾರಿತ ಕೃಷಿಗೆ ಉತ್ತೇಜನ ನೀಡುವುದು, ದೇಶೀ ಗೋವಂಶವನ್ನು ಸಂರಕ್ಷಿಸುವುದು ಹಾಗೂ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವುದು ಸೇರಿವೆ.
ಈ ಅಭಿಯಾನಕ್ಕೆ ರಾಜ್ಯದ ಜನತೆ, ರೈತರು, ಗೋಪ್ರೇಮಿಗಳು, ಗೋಭಕ್ತರು ಹಾಗೂ ಎಲ್ಲಾ ಸಂಘಟನೆಗಳು ಕೈಜೋಡಿಸುವಂತೆ ಮನವಿ ಮಾಡಲಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ, ಬೈಂದೂರಿನ ಗಜೇಂದ್ರ ಎಸ್. ಬೇಲೆಮನೆ, ಸುನಿಲ್ ಕೆ.ಆರ್, ನಾಗರಾಜ್ ಬೈಂದೂರು, ವಿಜಯ ಕೊಡವೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಿಡದಿ ಟೌನ್‌ಶಿಪ್ ಜಟಾಪಟಿ : ಸರ್ವೆಗೆ ಬಂದ ಅಧಿಕಾರಿಗಳಿಗೆ ಮಹಿಳೆಯರ ಪೊರಕೆ ಸೇವೆ.. ಕಾರಿನ ಗ್ಲಾಸ್ ಪೀಸ್ ಪೀಸ್!



















