ವಿಜಯಪುರ : ಕೌಟುಂಬಿಕ ಕಲಹ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ. ಬಾಬುಸಾಬ್ ಜಮಾದಾರ್ (35) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಐದು ವರ್ಷಗಳ ಹಿಂದೆ ತನ್ನ ಸ್ವಂತ ಸಹೋದರಿ ಮೀನಾಕ್ಷಿ ಅವರ ಮಗಳು ಸೌಂದರ್ಯಳನ್ನು ಬಾಬುಸಾಬ್ ವಿವಾಹವಾಗಿದ್ದ. ಕಳೆದ ಐದು ತಿಂಗಳುಗಳಿಂದ ಕೌಟುಂಬಿಕ ಕಲಹದ ಹಿನ್ನೆಲೆ ಸೌಂದರ್ಯ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ವಾಸವಾಗಿದ್ದಳು.
ನಿನ್ನೆ ರಾತ್ರಿ ಪತ್ನಿಯನ್ನು ಮರಳಿ ಕರೆದುಕೊಂಡು ಹೋಗಲು ಬಾಬುಸಾಬ್ ತನ್ನ ಸ್ನೇಹಿತ ಅಪ್ಪಾಲಾಲ್ ಮಕಾಸಿಯೊಂದಿಗೆ ಹಲಸಂಗಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಶುರುವಾಗಿದೆ.
ಗಲಾಟೆ ವೇಳೆ ಸೌಂದರ್ಯಳ ತಾಯಿ ಮೀನಾಕ್ಷಿ, ಸಹೋದರ ವಿಕಾಸ್ ಹಾಗೂ ರಫೀಕ್ ಸೇರಿ ಬಾಬುಸಾಬ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡ ಬಾಬುಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಾಬುಸಾಬ್ ಜೊತೆಗಿದ್ದ ಸ್ನೇಹಿತ ಅಪ್ಪಾಲಾಲ್ ಮಕಾಸಿಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಪರಶುರಾಮ ಮನಗೂಳಿ ಹಾಗೂ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಹೋಂಸ್ಟೇನಲ್ಲಿ ಪತ್ನಿಯ ನಿಗೂಢ ಸಾವು – 1 ತಿಂಗಳ ಬಳಿಕ ದಿಲ್ಲಿಯಲ್ಲಿ ಟೆಕ್ಕಿ ಪತಿ ಬಂಧನ


















