ಮೈಸೂರು : ಕನ್ನಡಿಗರ ಪ್ರೀತಿಯ ʻಗಾನಕೋಗಿಲೆʼ ಎಸ್.ಜಾನಕಿ ಅವರು ಇಹಲೋಕ ತ್ಯಜಿಸಿದ್ದು, ಇಡೀ ಸಂಗೀತ ಜಗತ್ತು ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತಿದೆ. ಹೈದರಾಬಾದ್‌ನಲ್ಲಿ ಅರಮನೆಯಂತಹ ಬಂಗಲೆಯಿದ್ದರೂ, ತಮ್ಮ ಕೊನೆಯ ದಿನಗಳನ್ನ ನೆಚ್ಚಿನ ಮೈಸೂರಿನಲ್ಲಿ ಕಳೆಯಲು ಬಯಸಿದ್ದ ಜಾನಕಮ್ಮ, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಎಸ್. ಜಾನಕಿ ಅವರ ನಿಧನವು ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಎಸ್.ಜಾನಕಿ ಮತ್ತು ನಾದಬ್ರಹ್ಮ ಹಂಸಲೇಖ ಅವರ ಕಾಂಬಿನೇಷನ್ ಸೃಷ್ಟಿಸಿದ ಸೂಪರ್ ಹಿಟ್ ಗೀತೆಗಳು ಎವರ್‌ಗ್ರೀನ್. ಎಸ್.ಜಾನಕಿ ಅವರ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾವುಕ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಸರ್ಕಾರದ ಮುಂದೆ ಒಂದು ಪ್ರಮುಖ ಬೇಡಿಕೆಯನ್ನ ಇಟ್ಟಿದ್ದಾರೆ.
ವಿಡಿಯೋದಲ್ಲಿ ಕಣ್ಣೀರಾಕುತ್ತಲೇ ಮಾತನಾಡಿದ ಹಂಸಲೇಖ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜಯಮಾಲಾ ಅವರಿಗೆ ವಿಶೇಷ ವಿನಂತಿಯೊಂದನ್ನ ಮಾಡಿದ್ದಾರೆ. “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಜಯಮಾಲಾ ಅವರಿಗೆ ನಮಸ್ಕಾರಗಳು. ಗಾನಕೋಗಿಲೆ ಜಾನಕಿ ಅಮ್ಮ ಕರುನಾಡಿನ, ಮೈಸೂರಿನ ಮಣ್ಣಲ್ಲಿ ತಮ್ಮ ಅಂತ್ಯವನ್ನ ಕಂಡಿದ್ದಾರೆ. ಅವರು ಮಣ್ಣಿಗೆ ಹೋಗೋದಕ್ಕೂ ಮುಂಚೆ, ಕರುನಾಡಿನ ಜನ ಕಣ್ಣು ತೆರೆಯಬೇಕು. ಅವರಿಗಾಗಿ ಇಲ್ಲೊಂದು ಸ್ಮಾರಕ ಮಾಡುವ ಯೋಜನೆಯನ್ನ ನಾವು ಅವರ ಕುಟುಂಬಕ್ಕೆ ವಿನಂತಿಸಬೇಕು. ಅವರು ಒಪ್ಪಿದರೆ, ಈಗಲೇ ಅದಕ್ಕೆ ಒಂದು ಸಿದ್ದತೆ ಆಗೋ ತರಹ ಒಂದು ಸೂಕ್ತವಾದ ಜಾಗವನ್ನ ನಿಗದಿಪಡಿಸೋದಕ್ಕೆ ತಾವು ಸರ್ಕಾರಕ್ಕೆ ತಿಳಿಸುವ ಒಂದು ದೊಡ್ಡ ಮನಸ್ಸು ಮಾಡಬೇಕು ಅಂತ ನಾನು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಜಾನಕಿ ಅಂದರೆ, ಸೀತೆ. ಸೀತೆ ಅಂದರೆ, ನಮಗೆ ಗೀತೆ. ಆಕೆಯ ಆಸೆ, ಕರುನಾಡಿನಲ್ಲಿ ಇರುವುದು. ದಯಮಾಡಿ, ನೀವು ಈ ಸುದ್ದಿಯನ್ನ ಸರ್ಕಾರಕ್ಕೆ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೈಸೂರಿನ ನೆಚ್ಚಿನ ತೋಟದಲ್ಲೇ ಜಾನಕಮ್ಮ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ!



















