ಬೆಂಗಳೂರು : ನಗರದಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಗಿರಿನಗರ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಚಿಗ್ಬಂಡು ನ್ವಾಂಕಪ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 12 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ (MDMA) ಹಾಗೂ 1,000 ಎಕ್ಸ್ಟಸಿ (Ecstasy) ಮಾತ್ರೆಗಳು ವಶಕ್ಕೆ ಪಡೆಯಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮೊದಲು ದೆಹಲಿಯಲ್ಲಿ ವಾಸವಿದ್ದು, ಅಲ್ಲಿಂದಲೇ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತಂದಿರುವುದು ಬೆಳಕಿಗೆ ಬಂದಿದೆ. ದೆಹಲಿಯಿಂದ ತಂದಿದ್ದ ಡ್ರಗ್ ಅನ್ನು ನಗರದಲ್ಲಿನ ಪೆಡ್ಲರ್‌ಗಳಿಗೆ ಪೂರೈಕೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಗಿರಿನಗರ ಪೊಲೀಸರು, ಬನಶಂಕರಿ ರಿಂಗ್ ರೋಡ್‌ನ ಪಿಇಎಸ್ ಕಾಲೇಜು (PES College) ಸಮೀಪ ಡ್ರಗ್ ತಲುಪಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ದೆಹಲಿಯಿಂದ ತಂದಿದ್ದ ಎಂಡಿಎಂಎ ಡ್ರಗ್ ಅನ್ನು ಬೆಂಗಳೂರಿನ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿಯ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು, ಡ್ರಗ್ಸ್ ಜಾಲದ ಸಂಪೂರ್ಣ ಮಾಹಿತಿ ಕಲೆಹಾಕಲು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಸ್ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ – ಕಂಡಕ್ಟರ್ ಅರೆಸ್ಟ್



















