ನವದೆಹಲಿ: ಭಾರತದ ಗಡಿಗೆ ಅತಿ ಹತ್ತಿರದಲ್ಲೇ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತ್ಯಂತ ದೊಡ್ಡ ಜಲವಿದ್ಯುತ್ ಯೋಜನೆ ‘ಮೇಡೋಗ್ ಅಣೆಕಟ್ಟು’ ಒಂದು ಭೌಗೋಳಿಕ ಬಾಂಬ್ ಆಗಿ ಮಾರ್ಪಟ್ಟಿದೆ. ಬ್ರಹ್ಮಪುತ್ರ (ಟಿಬೆಟ್‌ನಲ್ಲಿ ಯಾರ್ಲುಂಗ್ ತ್ಸಾಂಗ್ಪೋ) ನದಿಗೆ ಅಡ್ಡಲಾಗಿ ಚೀನಾ ಸರ್ಕಾರ ಸುಮಾರು 137 ಬಿಲಿಯನ್ ಡಾಲರ್ (1 ಟ್ರಿಲಿಯನ್ ಯುವಾನ್) ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ದೈತ್ಯ ಯೋಜನೆ, ಹಿಮಾಲಯದ ಅತ್ಯಂತ ಅಪಾಯಕಾರಿ ಭೂಕಂಪ ಪೀಡಿತ ವಲಯದಲ್ಲಿದೆ ಎಂದು ಸ್ವತಃ ಚೀನಾದ ಸರ್ಕಾರಿ ಸ್ವಾಮ್ಯದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಸಂಶೋಧಕರೇ ಎಚ್ಚರಿಸಿದ್ದಾರೆ. ಅರುಣಾಚಲ ಪ್ರದೇಶದ ಗಡಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿ ಈ ಅಣೆಕಟ್ಟು ನಿರ್ಮಾಣವಾಗುತ್ತಿರುವುದು ಭಾರತದಲ್ಲೂ ಆತಂಕ ಮೂಡಿಸಿದೆ.
ಭೂಕುಸಿತದ ಕೊಂಡಿ ‘ಪೈಝೆನ್ ಫಾಲ್ಟ್’ ಮೇಲೆಯೇ ಅಣೆಕಟ್ಟು
ಚೀನಾದ ಪ್ರಮುಖ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯ ಪ್ರಕಾರ, ಮೇಡೋಗ್ ಅಣೆಕಟ್ಟು ನಿರ್ಮಾಣವಾಗುತ್ತಿರುವ ಜಾಗದ ನಿಖರ ಕೆಳಭಾಗದಲ್ಲೇ ‘ಪೈಝೆನ್ ಫಾಲ್ಟ್’ (Paizhen Fault) ಎಂಬ ಸಕ್ರಿಯ ಭೂಕುಸಿತದ ಸೀಳು ರೇಖೆ ಹಾದುಹೋಗಿದೆ. ಸುಮಾರು 26 ಲಕ್ಷ ವರ್ಷಗಳ ಹಿಂದಿನ ಪ್ಲೆಸ್ಟೊಸೀನ್ ಯುಗದಿಂದಲೂ ಇದು ಸಕ್ರಿಯವಾಗಿದ್ದು, ನಿರಂತರವಾಗಿ ಭೂಗರ್ಭದ ಚಲನೆಗೆ ಕಾರಣವಾಗಿದೆ. 2017ರಲ್ಲಿ ಟಿಬೆಟ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪ ಇದಕ್ಕೆ ಸ್ಪಷ್ಟ ನಿದರ್ಶನ. ಈ ಸಕ್ರಿಯ ಸೀಳು ರೇಖೆಯಿಂದಾಗಿ ಸುತ್ತಮುತ್ತಲಿನ ಬಂಡೆಗಳು ಈಗಾಗಲೇ ಪುಡಿಯಾಗಿದ್ದು, ಭೂಮಿಯ ಆಳದ ಶಕ್ತಿ ಕುಂದಿದೆ. ಇದರ ಪರಿಣಾಮವಾಗಿ, 60,000 ಮೆಗಾವ್ಯಾಟ್ ಸಾಮರ್ಥ್ಯದ ಈ ಬೃಹತ್ ಅಣೆಕಟ್ಟು ಮತ್ತು ಅದರ ಬೃಹತ್ ಜಲಾಶಯದ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಅಲ್ಲಿನ ಭೂಮಿಗೆ ಇಲ್ಲ ಎಂದು ಭೂವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಭೂಕಂಪ, ಜಲಪ್ರಳಯದ ಭೀತಿ
ಅಣೆಕಟ್ಟಿನ ಜಲಾಶಯದಲ್ಲಿ ನೀರು ತುಂಬುತ್ತಿದ್ದಂತೆ, ಸುತ್ತಮುತ್ತಲಿನ ಸಡಿಲವಾದ ಮಣ್ಣು ಮತ್ತು ಬಂಡೆಗಳು ನೀರಿನಿಂದ ತೇವಗೊಂಡು ತೀವ್ರ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ. ಒಂದು ವೇಳೆ ಈ ವಲಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದರೆ, ಇಡೀ ಅಣೆಕಟ್ಟಿನ ಸುರಕ್ಷತೆಗೆ ಧಕ್ಕೆ ಬಂದು ಇತಿಹಾಸದಲ್ಲೇ ಕಾಣದ ಜಲಪ್ರಳಯ ಸೃಷ್ಟಿಯಾಗುವ ಅಪಾಯವಿದೆ. ಹೀಗಾಗಿ ನಿರ್ಮಾಣ ಹಂತದಲ್ಲೇ ತಡೆಗೋಡೆಗಳು ಹಾಗೂ ಕಾಂಕ್ರೀಟ್ ಬಲವರ್ಧನೆಗೆ ಚೀನಾ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. 2025ರ ಜುಲೈನಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2033ರ ವೇಳೆಗೆ ವಾಣಿಜ್ಯ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಬೀಜಿಂಗ್ ಹೊಂದಿದೆ.
ಭಾರತಕ್ಕಿರುವ ಅಪಾಯವೇನು?
ಈ ಅಣೆಕಟ್ಟಿನ ಮೂಲಕ ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿಯ ನೀರನ್ನು ಚೀನಾ ಸಂಪೂರ್ಣವಾಗಿ ನಿಯಂತ್ರಿಸಬಹುದು ಅಥವಾ ತಡೆಯಬಹುದು ಎಂಬ ಚರ್ಚೆಗಳು ಈ ಹಿಂದೆ ನಡೆದಿದ್ದವು. ಆದರೆ ಜಲವಿಜ್ಞಾನಿಗಳು ಮತ್ತು ಆರ್ಥಿಕ ತಜ್ಞರ ಪ್ರಕಾರ, ಚೀನಾಕ್ಕೆ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಬ್ರಹ್ಮಪುತ್ರ ನದಿಯ ಒಟ್ಟು ನೀರಿನ ಪೈಕಿ ಕೇವಲ ಶೇ.10ರಿಂದ 15 ರಷ್ಟು ಭಾಗ ಮಾತ್ರ ಟಿಬೆಟ್‌ನಿಂದ ಬರುತ್ತದೆ. ಭಾರತದ ಗಡಿ ಪ್ರವೇಶಿಸಿದ ನಂತರ ಮಳೆ ಹಾಗೂ ಉಪನದಿಗಳಿಂದ ನದಿಗೆ ಹೆಚ್ಚಿನ ನೀರು ಸೇರ್ಪಡೆಯಾಗುತ್ತದೆ. ಆದರೆ ಪ್ರಸ್ತುತ ವರದಿಯ ಪ್ರಕಾರ ಭಾರತಕ್ಕಿರುವ ಅಸಲಿ ಆತಂಕ ನೀರು ನಿಲ್ಲಿಸುವುದಲ್ಲ, ಬದಲಾಗಿ ಭೂಕಂಪ ವಲಯದಲ್ಲಿರುವ ಈ ಬೃಹತ್ ಅಣೆಕಟ್ಟು ಒಂದು ವೇಳೆ ಒಡೆದು ಹೋದರೆ ಕೆಳಭಾಗದಲ್ಲಿರುವ ಭಾರತದ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ಮತ್ತು ಬಾಂಗ್ಲಾದೇಶಗಳು ಸಂಪೂರ್ಣವಾಗಿ ಕೊಚ್ಚಿಹೋಗುವ ಭೀತಿ ಎದುರಾಗಿದೆ.



















