ಉಡುಪಿ : ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನದಲ್ಲಿ ಮಹತ್ವದ ಬೆಳವಣಿಗೆಯೊಂದು ದಾಖಲಾಗಿದೆ. ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿಯಾದ ‘ಕನಿ ಮರನಂಡು’ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದೆ. ಈ ಅಪರೂಪದ ಏಡಿ ಪಶ್ಚಿಮ ಘಟ್ಟದ ಸಮೃದ್ಧ ಜೀವವೈವಿಧ್ಯಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.

ಇದುವರೆಗೆ ಈ ಅಪರೂಪದ ಏಡಿ ಕೇವಲ ಕೇರಳದ ಅಗಸ್ತ್ಯಮಲೈ ಜೈವಿಕ ವಲಯದಲ್ಲಿ ಮಾತ್ರ ಇವೆ ಎಂಬ ವರದಿಗಳಿದ್ದವು. ಇದೀಗ ಸುಮಾರು 566 ಕಿಲೋಮೀಟರ್ ದೂರದಲ್ಲಿರುವ ಆಗುಂಬೆಯಲ್ಲಿ ಈ ಪ್ರಭೇದ ಪತ್ತೆಯಾಗಿರುವುದು, ಇದರ ವಿತರಣಾ ವ್ಯಾಪ್ತಿಯ ಕುರಿತು ಹೊಸ ಬೆಳಕು ಚೆಲ್ಲಿದೆ.
ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಅಧ್ಯಯನದಲ್ಲಿ ಈ ಅಪರೂಪದ ಮರವಾಸಿ ಏಡಿ ಪತ್ತೆಯಾಗಿದೆ.
ಗೆಕಾರ್ಸಿನುಸಿಡೆ ಕುಟುಂಬಕ್ಕೆ ಸೇರಿದ ಈ ಪ್ರಭೇದವು ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಎಂಬ ವಿಶೇಷತೆಯನ್ನು ಹೊಂದಿದೆ.
ಇದನ್ನೂ ಓದಿ : ಜು.12ರಂದು ಮೈಸೂರಲ್ಲಿ ‘ಮಧುರ ಗೀತೆಗಳ ಸುಮಧುರ ಸಂಜೆ’ ಕರೋಕೆ ಗಾಯನ ಕಾರ್ಯಕ್ರಮ!



















